ಉಡುಪಿ: ಅನುಮಾನಸ್ಪದವಾಗಿ ಇಹಲೋಕ ತ್ಯಜಿಸಿದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳಿಗೆ ಹೆಣ್ಣು ಹಾಗೂ ಹೆಂಡದ ಚಟವಿತ್ತು ಎಂದು ಸ್ಪೋಟಕ ಮಾಹಿತಿಯನ್ನು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೊರಹಾಕಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಶಿರೂರು ಶ್ರೀಗಳ ನಿಗೂಢ ಸಾವಿನ ವಿಚಾರದಲ್ಲಿ ಅಷ್ಟ ಮಠಗಳ ಕಡೆಯಿಂದ ಯಾವುದೇ ತಪ್ಪುಗಳು ನಡೆದಿಲ್ಲ. ಅವರಿಗೆ ಕುಡಿಯುವ ಮತ್ತು ಮಹಿಳೆಯರ ಚಟವಿತ್ತು. ಹೆಣ್ಣು ಮತ್ತು ಹೆಂಡದ ಸಹವಾಸದಿಂದ ಸನ್ಯಾಸತ್ವಕ್ಕೆ ದ್ರೋಹ ಬಗೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು, ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ಕುರಿತಾಗಿ ಮಾತನಾಡಿದ ಅವರು, ಸಾವಿನ ಸ್ಥಳಕ್ಕೆ ಹೋಗುವ ಕ್ರಮ ನಮ್ಮಲ್ಲಿಲ್ಲ. ಅಲ್ಲದೇ ನಾನು ನಿನ್ನೆ ಹುಬ್ಬಳ್ಳಿಯಲ್ಲಿ ಇದ್ದೆ ಎಂದರು.
ಶ್ರೀಗಳಿಗೆ ವಿಷಪ್ರಾಶನವಾಗಿದೆ ಎಂಬ ವಿಚಾರದ ಕುರಿತಾಗಿ ಮಾತನಾಡಿದ ಅವರು, ಯಾವ ಸ್ವಾಮೀಜಿಗಳೂ ವಿಷ ಹಾಕಲು ಸಾಧ್ಯವಿಲ್ಲ. ನಾನು ಬಾಲ್ಯದಲ್ಲಿದ್ದಾಗ ಕೆಲವು ಪ್ರಕರಣ ಕೇಳಿದ್ದೆ. ಆದರೆ, ದುಶ್ಚಟ ಬಿಡುವಂತೆ ಸ್ವತಃ ನಾನೇ ಶಿರೂರು ಶ್ರೀಗಳಿಗೆ ತಿಳಿ ಹೇಳಿದ್ದೆ. ತಾರುಣ್ಯದಲ್ಲಿ ಸ್ತ್ರೀಯರ ಸಂಪರ್ಕವಿತ್ತು. ಅವರು ಮಠಾಧೀಶರಿಗೆಲ್ಲಾ ಮಕ್ಕಳಿದ್ದರು ಎಂದು ಹೇಳಿಕೆ ನೀಡಿದ್ದರು. ಅದು ಎಲ್ಲರಿಗೂ ಅಪಾರವಾದ ನೋವು ತಂದಿತ್ತು ಎಂದರು.
ಇಂತಹ ಗುಣಗಳ ನಡುವೆಯೇ ಶಿರೂರು ಶ್ರೀಗಳಲ್ಲಿ ಕೆಲವು ಒಳ್ಳೆಯ ಗುಣಗಳೂ ಸಹ ಇದ್ದವು. ಅವರು, ಉತ್ತಮ ಕಲಾವಿದರಾಗಿದ್ದು, ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಸಹಾಯ ಮಾಡಿದ್ದರು. ಬ್ರಾಹ್ಮಣೇತರರೊಂದಿಗೂ ಬೆರೆತು ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
Discussion about this post