ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಳಿಗ್ಗೆದ್ದು ಎರಡು ಪೀಸ್ ಬ್ರೆಡ್ ತಿಂದು ಅರ್ಧ ಕಾಫಿ ಕುಡಿದು ದಿನವಿಡೀ ಕೆಲಸ ಕೆಲಸ ಎಂದು ಒತ್ತಡದಲ್ಲೇ ಒದ್ದಾಡಿ ತಲೆನೋವು ಬರಿಸಿಕೊಂಡು ದೇಹವನ್ನು ಬೆಳೆಸಿಕೊಂಡು ವಿಚಿತ್ರ ಮನಸ್ಥಿತಿಯಲ್ಲಿ ಮಾಡರ್ನು ಲೈಫನ್ನು ಜೀವಿಸುತ್ತಿರುವ ಅನೇಕಾನೇಕ ಮಂದಿಗೆ ಶಿವ ಇಷವಾಗುವುದಕ್ಕೆ, ಮಾಡೆಲ್ ಥರ ಕಾಣಿಸುವುದಕ್ಕೆ ಕಾರಣವಿದೆ. ಶಿವ ಕೂಲ್. ಶಿವನದ್ದು ಸಿಕ್ಸ್ ಪ್ಯಾಕ್. ಶಿವ ಮನಸ್ಸು ಸರಿ ಇಲ್ಲದಿದ್ದರೆ ಡಾನ್ಸು ಮಾಡಬಲ್ಲ. ಒತ್ತಡದಿಂದ ಮುಕ್ತನಾಗಬಲ್ಲ, ಅವನಿಗೆ ಶೋಕಿಯಿಲ್ಲ. ಅವನು ಎಲ್ಲರೂ ತನ್ನನ್ನು ಇಷ್ಟಪಡಲಿ ಎಂದು ಬಯಸುವುದಿಲ್ಲ. ಇಂಥಾ ವ್ಯಕ್ತಿತ್ವ ಹೊಂದಲು ಆಧುನಿಕ ಮನಸ್ಸು ಬಯಸುತ್ತದೆ. ಇಷ್ಟವಿದ್ದರೂ ಇಂಥಾ ವ್ಯಕ್ತಿತ್ವ ಹೊಂದುವುದು ಸಾಧ್ಯವಾಗುವುದಿಲ್ಲ. ಶಿವ ಅಚ್ಚರಿಯಾಗಿಯೇ ಉಳಿಯುತ್ತಾನೆ. ಇವರು ಆರಾಧಕರಾಗೇ ಉಳಿಯುತ್ತಾರೆ.
ನಮ್ಮಂತೆ ಮನುಷ್ಯ
ಕೃಷ್ಣ ಮನುಷ್ಯನಂತೆ ಕಾಣುತ್ತಿದ್ದ. ಆಮೇಲೆ ದೇವರಾಗಿ ಹೋದ. ನಮಗೊಬ್ಬ ದೇವರಾಗಿದ್ದೂ ಮನುಷ್ಯನಂತಿರುವ ವ್ಯಕ್ತಿ ಸಿಕ್ಕಿದ್ದು ಶಿವನಲ್ಲಿ. ಹೀಗೆ ಹೇಳುವ ಹುಡುಗನಿಗೆ ಶಿವ ರೋಲ್ ಮಾಡೆಲ್, ಶಿವನಿಗೆ ಅಹಂಕಾರವಿಲ್ಲ. ಶಿವ ತಾನು ದೇವರಂತೆ ನಡೆದುಕೊಳ್ಳಲಿಲ್ಲ. ಬಾಯಿಬಿಟ್ಟು ಮಾತನಾಡಿದ್ದನ್ನೂ ಎಲ್ಲೂ ಕೇಳಲಿಲ್ಲ. ಅವನು ಹೇಳದೆಯೂ ಎಲ್ಲವನ್ನೂ ಹೇಳಿದ. ಹೇಗೆ ಬದುಕಬೇಕು ಅನ್ನುವುದನ್ನು ತೋರಿಸಿದ. ಹೇಗಿರಬೇಕು ಅನ್ನುವುದನ್ನು ಕಲಿಸಿದ. ಅವನು ಸುಮ್ಮನಿದ್ದೆ ಎಲ್ಲಾ ಅದ್ಭುತವನ್ನೂ ನಡೆಸಿದ. ಅವನು ಲಯಕರ್ತ ಎಂಬ ಕಾರಣಕ್ಕೆ ನಲಿದಾಡಲಿಲ್ಲ. ಸುಮ್ಮನೆ ಧ್ಯಾನಸ್ಥನಾಗಿ ಕೂತ ಕೂಲ್ ಶಿವ ಇಷ್ಟವಾಗಿದ್ದಕ್ಕೆ ದೊಡ್ಡ ಕಾರಣಗಳು ಬೇಕಿಲ್ಲ.
ಹೀಗೆ ಒಂದಲ್ಸ ಭಸ್ಮಾಸುರ ಅಂಬೋ ರಾಕ್ಷಸ, ಶಿವನೇ ನನ್ನಪ್ಪಾ ನಾನು ಯಾರ ತಲೆ ಮೇಲೆ ಕೈ ಇಟ್ಟರೂ ಅವರು ಭಸ್ಮ ಆಗ್ಹೋಗೋ ಥರ ಮಾಡು ಅಂತ ಕೇಳಿದ್ನಾ, ನಮ್ಮ ಬೋಳೇಶಿವ ಅಸ್ತು ಅಂದುಬಿಟ್ಟ. ತಕೋ! ಹಲಲಲಲಲಲ ಅಂತ ಕಂಡ-ಕಂಡವರ ತಲೆ ಮೇಲೆ ಕೈಯಿಟ್ಟು ಊರೆಲ್ಲಾ ಭಸ್ಮ ಮಾಡುತ್ತಾ ಹೊರಟ ಭಸ್ಮಾಸುರ! ಇವನ ರುದ್ರಾಟಕ್ಕೆ ಹೆದರಿ, ಜನರೆಲ್ಲಾ ವಿಷ್ಣು ಹತ್ತಿರ ಓಡಿದ್ರು, ವಿಷ್ಣು ಒಂಥರಾ ಟ್ರಬಲ್-ಶೂಟರ್ ಇದ್ದ ಹಾಗೆ. ಶಿವ ಕಂಡವರಿಗೆಲ್ಲಾ, ಅಸ್ತು ಅಂತಿದ್ನಾ, ಜನ ಎಲ್ಲಾ ವಿಷ್ಣು ಹತ್ರ ಓಡಿ ಪರಿಹಾರ ಕೇಳೊಕೆ ಓಡಿದ್ರು. ಆಗ ವಿಷ್ಣು ಚೆಂದದ ಹುಡುಗಿ ವೇಷದಲ್ಲಿ ಭಸ್ಮಾಸುರನ ಹತ್ರ ಬಂದು, ನಾನು ಮೋಹಿನಿ ಅಂತ ನೃತ್ಯಗಾತಿ. ನಿನ್ನ ಕಂಡ್ರೆ ನಂಗೆ ತುಂಭಾ ಇಷ್ಟ. ನಾ ನಿಂಗೂ ನೃತ್ಯ ಕಲಿಸ್ತೀನಿ ಅಂದ. ಎಷ್ಟ್ ಚೆನಾಗಿದಾಳಲ್ಲ. ಹೆಂಗೂ ನಂಗೆ ನೃತ್ಯ ಬರಲ್ಲ ಕಲಿತ್ರಾಯ್ತು ಅಂತ ಭಸ್ಮಾಸುರ ಒಪ್ಪಿದ. ಮೋಹಿನಿ ನೃತ್ಯ ಮಾಡ್ತಾ ತನ್ನ ತಲೆ ಮೇಲೆ ಕೈ ಇಟ್ಕೊಂಡ್ಲಾ, ಅದನ್ನೇ ಅನುಕರಿಸಿದ ಭಸ್ಮಾಸುರ ಸುಟ್ಟೂ ಬೂದಿಯಾದ!
ನಮಗೆಲ್ಲಾ ಇರೋ ಹಾಗೆ ದೇವರಿಗೂ ಒಂದೊಂದು ಕೆಲಸ ಇರುತ್ತದೆ. ಹಾಗೆ ಶಿವ ಲಯಕರ್ತ. ಹಂಗದ್ರೆ ಏನಪ್ಪಾ ಅಂತಂದ್ರೆ ಈಗ ಕಂಪ್ಯೂಟರ್‌ನಲ್ಲಿ ಬೇಡದೇ ಇರೋ ಹಾಗೂ ಹಳೇ ಬೇಡದೆ ಇರೋ ಫೈಲ್‌ಗಳು ಇರುತ್ತೆ ಅಲ್ವಾ. ಅದನ್ನು ಡಿಲಿಟ್ ಮಾಡಿದ್ರೇನೆ ಕಂಪ್ಯೂಟರ್ ಕ್ಲೀನ್ ಆಗಿ ಚೆನ್ನಾಗಿ ಕೆಲಸ ಮಾಡೋದು. ಇಲ್ಲ ಅಂದ್ರೆ ಬೇಡದೇ ಇರೋದು. ಬೇಕಾಗಿರೋದು ಎಲ್ಲಾ ದೇರಿಕೊಂಡು ಕಂಪ್ಯೂಟರ್ ತುಂಬಿಕೊಂಡು ಕೆಲಸವೇ ಮಾಡಲ್ಲ, ಹಾಗೆ ಭೂಮಿ ಮೇಲಿರೋ ಮನುಷ್ಯರಿಗೆ ಶಿವ ಡಿಲಿಟ್ ಬಟನ್ ಇದ್ದ ಹಾಗೆ. ತುಂಬಾ ವಯಸ್ಸಾಗಿರೋ ಅಥವಾ ಕೆಟ್ಟವರಾಗಿಯೋ ಮನುಷ್ಯರನ್ನು ಡಿಲಿಟ್ ಮಾಡೋದು ಶಿವನ ಕೆಲಸ. ಆಗ, ಹೊಸದಾಗಿ ಹುಟ್ಟೋರಿಗೆ ಜಾಗ ಆಗುತ್ತದೆ.
ಶಿವನಿಂದ ಕಲಿಯುವ ಪಾಠಗಳು
1. ಶಿವ ಎಂದರೆ ಶಾಂತ ಎಂದರ್ಥ. ಶಿವನಿಂದ ನಾವು ಕಲಿಯಬೇಕಾದ ಮೊದಲ ಪಾಠವೇ ಶಾಂತತೆ ಅಂದರೆ ಸಹನೆ. ಪ್ರಸನ್ನತೆ. ಎಂತಹ ಸಂದರ್ಭದಲ್ಲೂ ವಿಚಲಿತರಾಗದಂತೆ ಬಾಳುವುದು. ಬದುಕನ್ನು ರೂಪಿಸಿಕೊಳ್ಳುವುದು.
2. ಶಿವ ಎಂದರೆ ಸರಳತೆ. ಜಟಾಜೂಟಧಾರಿಯಾಗಿ, ಮೃಗಚರ್ಮಾಂಬರಿಯಾದ ಶಿವನ ಉಡುಗೆಯೇ ಸರಳ. ಆತನೆಂದೂ ಆಡಂಬರವನ್ನು ಬಯಸಿದವನಲ್ಲ. ನಮ್ಮ ಬದುಕು ಆಡಂಬರದಿಂದ, ಡಾಂಭಿಕ ಜೀವನ ಶೈಲಿಯಿಂದ ಹೊರತಾಗಿರಬೇಕು. ಸರಳತೆಯೇ ಬದುಕಿನ ಉಸಿರಾಗಬೇಕು.
3. ಸದಾಚಾರ ಸದಾಶಯಗಳಿಗೆ ಒಲಿವ ಸದಾಶಿವ ದುರ್ನಡತೆ, ದುರಾಚಾರಗಳನ್ನು ಕಂಡಾಗ ಪ್ರಳಯ ರುದ್ರನಾಗುತ್ತಾನೆ. ಏರುಪೇರಿನ ಹಾದಿಯ ಜೀವನದಲ್ಲೂ ಸುಗುಣ, ದುರ್ಗುಣಗಳು ಎದುರಾಗುತ್ತವೆ. ನಮ್ಮ ದೃಷ್ಟಿ ದುರ್ಗುಣಗಳನ್ನು ಮೆಟ್ಟಿ ನಿಲ್ಲಬೇಕು. ಸಗುಣಗಳನ್ನು ಮನನ ಮಾಡಿಕೊಳ್ಳಬೇಕು.
4. ಯೋಗಿಗಳಿಗೆ ಯೋಗಿಯಾದವನೇ ಸಾಂಬಶಿವ. ಧ್ಯಾನ ತತ್ಪರನಾದ ಯೋಗಿ ಜ್ಞಾನದ ಸಂಕೇತವಾಗಿ ಕಂಗೋಳಿಸುತ್ತಾನೆ. ನಾವಿಲ್ಲಿ ಕಲಿಯಬೇಕಾದ ಅಂಶವೆಂದರೆ, ಜ್ಞಾನಾರ್ಜನೆ ನಮ್ಮ ಗುರಿಯಾಗಬೇಕಾದರೆ ಮೊದಲು ಮನಸ್ಸಿಗೆ ಕಡಿವಾಣ ಹಾಕಿಕೊಳ್ಳಬೇಕು. ಚಂಚಲತೆಯನ್ನು ದೂರಮಾಡಿಕೊಂಡು ಜ್ಞಾನಾರ್ಜನೆಯತ್ತ ಮನಸ್ಸನ್ನು ನಿಲ್ಲಿಸಬೇಕು.
5. ಭಸ್ಮಾರೂಢನಾದ ಶಿವ ರುದ್ರಾಕ್ಷಿಯ ಹೊರತು ಪಡಿಸಿ ಮತ್ಯಾವ ಆಭರಣವನ್ನು ಧರಿಸುವುದಿಲ್ಲ. ನಾವು ಕಲಿಯಬೇಕಾದುದಿಷ್ಟೇ. ಪ್ರಾಪಂಚಿಕ ವಿಷಯಗಳಿಗೆ ಅಂಟಿಕೊಳ್ಳಬಾರದು. ವಿದ್ಯಾರ್ಥಿ ಜೀವನದ ದೃಷ್ಟಿ ಜ್ಞಾನವನ್ನು ಸಂಪಾದಿಸುವತ್ತ ನೆಟ್ಟಿರಬೇಕೇ ಹೊರತು ವಿಷಯ ಲಂಪಟ ಮಾಡುವ ಪ್ರಲೋಭನೀಯ ವಸ್ತುಗಳೆಂದರೆ ಗ್ಯಾಜೆಟ್, ಕಂಪ್ಯೂಟರ್, ಮೊಬೈಲ್ ಇತ್ಯಾದಿ.
ಬದುಕಿನ ಪಂಚಾಕ್ಷರಿ
ಮಹೇಶ್ವರ ಬದುಕಿಗೆ ತುಂಬ ಹತ್ತಿರ. ಸರಳಾತಿ ಸರಳಾತೆ, ಬದುಕಿನ ಮಾರ್ದವತೆ, ಆತ್ಮಸಂಯಮ, ಯೋಗಶಕ್ತಿಗೆ ಪ್ರತಿರೂಪದಂತಿರುವ ಶಿವನ ಜೀವನ ನಮಗೂ ಮಾಗದರ್ಶನ. ಅವನ ಮಹೋನ್ನತ ಬಾಳಿನಿಂದ ಎತ್ತಿಕೊಂಡ ಪಂಚಸೂತ್ರಗಳು ಇಲ್ಲಿವೆ. ಇದೂ ಒಂಥರಾ ಶಿವ ಪಂಚಾಕ್ಷರಿ.
ದೇವ ದೇವರ ದೇವ ಮಹಾದೇವ ಅಂತ ಭಜಕರು ಕೊಂಡಾಡುವ ಮಹೇಶ್ವರ, ಪೊರೆಯುವ ಶಿವನೂ ಹೌದು, ತರಿಯುವ ರುದ್ರನೂ ಹೌದು. ಅವನು ಶಿಷ್ಟ ಪಾಲಕನೂ ಆಗಬಲ್ಲ, ದುಷ್ಟ ದಮನಕನೂ ಆಗಬಲ್ಲ. ಏಕಕಾಲದಲ್ಲಿ ಸೌಂದರ್ಯದ ಖನಿಯೂ, ಭಯ ಹುಟ್ಟಿಸುವ ಸ್ಮಶಾನವಾಸಿಯೂ ಆಗಿ ತೋರಬಲ್ಲ.
ಮೇಲ್ನೋಟಕ್ಕೆ ನೋಡಿದರೆ ಶಿವ ಕಲರ್‌ಪುಲ್ ಆಲ್ಲ. ಬರಿ ಮೈಯ ಭಸ್ಮಧಾರಿ, ಜಟೆಯ ಯೋಗಿಯಲ್ಲಿ ಏನು ಸೌಂದರ್ಯ ಎಂದು ಕೇಳಬಹುದು. ಆದರೆ, ಶಿವ ಜಗತ್ತಿನ ಸೌಂದರ್ಯಕ್ಕೊಂದು ಮೀಮಾಂಸೆ. ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡರೂ ವಸ್ತುಶಃ ಏನೂ ಬೇಡವೆಂಬಂತೆ ಬದುಕುವ ನಿರ್ಮೋಹಿ. ಬಹು ಬಣ್ಣಗಳಲ್ಲಿ ಹರಡಿಕೊಂಡಿರುವ ಶಿವನ ಬದುಕು ಎನ್ನುವುದು ನಿಜಕ್ಕೂ ನಮಗೆ ವಿವೇಕದ ಮಹಾಪಾಠಗಳನ್ನು ಹೇಳಿಕೊಡಬಲ್ಲ ಮಹಾ ಟೀಚರ್. ನಮ್ಮನ್ನು ಆವರಿಸಿಕೊಂಡಿರುವ ಶಿವಶಕ್ತಿ, ಬದುಕಿಗೆ ನೀಡಬಲ್ಲ ಪಂಚಸೂತ್ರಗಳಿವು.
1. ಆತ್ಮಸಂಯಮದಿಂದ ದಿವ್ಯಶಕ್ತಿ
ಶಿವ ಎಂದ ಕೂಡಲೇ ನಮಗೆ ನೆನೆಪಿಗೆ ಬರುವುದು ಯೋಗ ಮುದ್ರೆಯಲ್ಲಿ ಕುಳಿತ ಮಹಾದೇವ. ಧ್ಯಾನ ಭಂಗಿಯಲ್ಲಿ ಕುಳಿತ ಈಶ್ವರ ನಮಗೆ ಆಸೆ, ಮೋಹಗಳ ಪಾಶಕ್ಕೆ ಒಳಗಾಗದ ಮನೋನಿಯಂತ್ರಣದ ಮೂಲಕ ಗುರಿಯತ್ತ ನೇರ ದೃಷ್ಟಿ ಇಟ್ಟ ಒಬ್ಬ ಸಂತನ ಹಾಗೆ ಕಾಣುತ್ತಾನೆ. ತನ್ನ ಅಹಂಕಾರವನ್ನು ನಿಗ್ರಹಿಸಲೇಂದೇ ತ್ರಿಶೂಲಧಾರಿಯಾದ ಆತ ಇತರರ ದುರಹಂಕಾರಗಳನ್ನು ಅದೇ ರೀತಿ ಮೆಟ್ಟಿ ನಿಲ್ಲುತ್ತಾನೆ. ಗಮನಿಸಿ ನೋಡಿ, ಒಳ್ಳೆಯವನಾಗುತ್ತೇನೆ ಎಂದರೆ, ನಿನ್ನ ಮೊರೆ ಹೊಕ್ಕಿದ್ದೇನೆ ಎಂದರೆ ಸಂಪೂರ್ಣ ಬೆಂಬಲ ನೀಡುವ ಈ ದೇವ, ಅನ್ಯಾಯಕ್ಕೆ ಮಾತ್ರ ಝಿರೋ ಟಾಲರೆನ್ಸ್ ಪ್ರದರ್ಶಿಸುತ್ತಾನೆ.
2. ಸರಳ ಬದುಕಿನ ಮಹಾಪಾಠ
ಶಿವ ಸಾಕ್ಷಾತ್ ದೇವರು, ತ್ರಿಮೂರ್ತಿಗಳಲ್ಲಿ ಒಬ್ಬರು. ಅವನಿಗೆ ಕೈಲಾಸದಲ್ಲಿ ಅರಮನೆ ಇದ್ದರೂ ಭಸ್ಮದಿಂದ ತುಂಬಿ ಹೋದ ಸ್ಮಶಾನವನ್ನೇ ಮಹಾಮನೆಯಾಗಿಸಿದ್ದರ ಹಿಂದೆ ಅಡಗಿರುವುದು ನಿರ್ಮೋಹ ಶಕ್ತಿ. ತನ್ನ ಕರ್ತವ್ಯವೇ ಪ್ರಧಾನ ಎನ್ನುವ ನೆಲೆಯಲ್ಲಿ ಬದುಕಿನ ಅಂತ್ಯಕ್ಕೆ ಪೂರಕವಾದ ಸ್ಮಶಾನವನ್ನು ನೆಲೆಯಾಗಿ ಆರಿಸಿರಬಹುದು ಶಿವ.
ಶಿವ ದೇವಾಧಿದೇವನೇ ಆದರೂ ಹಲವು ಸಂದರ್ಭದಲ್ಲಿ ನಮ್ಮ ನಿಮ್ಮಂತೆ ಅನಿಸಿಬಿಡುತ್ತಾನೆ. ಭಸ್ಮಾಸುರನ ಮೃತ್ಯು ಹಸ್ತಗಳಲ್ಲಿ ಸಿಕ್ಕಿಹಾಕಿಕೊಂಡಾಗ, ಬ್ರಹ್ಮಕಪಾಲ ಬೆನ್ನಟ್ಟಿ ಬರುವಾಗ ಶಿವನೂ ಯಃಕಶ್ಚಿತ್ ಮನುಷ್ಯನೋ ಅನಿಸಿಬಿಡುತ್ತದೆ. ಆದರೆ, ಇದು ಸರ್ವಶಕ್ತನಿಗೂ ಸಂಕಟ ತಪ್ಪಿದ್ದಲ್ಲ, ಅಂಥ ಸಂದರ್ಭದಲ್ಲಿ ಇನ್ನೊಬ್ಬರ ಸಹಾಯ ಕೇಳುವ ದೀನತೆಯೂ ಬೇಕು ಎಂಬ ಸಂದೇಶ ಕೊಡುತ್ತಾನೆ ಅನಿಸುತ್ತದೆ ಶಿವ.
3. ನೆಗೆಟಿವ್ ಟು ಪಾಸಿಟಿವ್
ಸಮುದ್ರ ಮಥನ ಕಾಲದಲ್ಲಿ ಸಮುದ್ರದಿಂದ ಎದ್ದು ಬಂದ ಹಾಲಾಹಲವನ್ನು ಕುಡಿದ ಪ್ರಕರಣ ಶಿವನ ಪಾಸಿಟಿವ್ ಶಕ್ತಿಗೆ ಒಳ್ಳೆಯ ನಿದರ್ಶನ. ಜಗತ್ತಿನ ಅತ್ಯಂತ ಘೊರ ಸಂಕಟವೊಂದು ಆವರಿಸಿಕೊಳ್ಳಲೇಬೇಕು ಎಂದಾದಾಗ ಅದಕ್ಕೆ ತನ್ನನೇ ತೆರೆದುಕೊಳ್ಳುವ ಔದಾರ್ಯದ ಪ್ರತೀಕವದು. ಜತೆಗೆ, ಏನನ್ನಾದರೂ ಸ್ವೀಕರಿಸಿ ಸಂಭಾಳಿಸಿಕೊಳ್ಳಬಲ್ಲೇ ಎನ್ನುವ ಆತ್ಮವಿಶ್ವಾಸದ ಧನಾತ್ಮಕ ಮನೋಸ್ಥಿತಿಯದು.
ನೇತ್ಯಾತ್ಮಕ ಶಕ್ತಿಯೇ ಆದರೂ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು, ಜಗತ್ತಿಗೂ ತನಗೂ ಇಬ್ಬರಿಗೂ ತೊಂದರೆಯಾಗದಂತೆ ಸಂಭಾಳಿಸಿ ನೀಲಕಂಠನಾದ. ಕೊರಳ ತುಂಬ ವಿಷವೇ ತುಂಬಿದ್ದರೂ ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ಅದು ಕಾಣಿಸದಂತೆ ವರ್ತಿಸಿದ್ದರಲ್ಲಿ ಬದುಕಿಗಿರುವ ಪಾಠ ದೊಡ್ಡದು.4. ಅರ್ಧಾಂಗಿಗೆ ಅರ್ಧ ಬದುಕು
ಶಿವನನ್ನು ಕಲ್ಪಿಸಿಕೊಳ್ಳುವ ಚಿತ್ರಗಳಲ್ಲಿ ಅರ್ಧನಾರೀಶ್ವರವೂ ಒಂದು. ಹೆಣ್ಣಿಲ್ಲದೆ ಗಂಡು ಪರಿಪೂರ್ಣನೇ ಅಲ್ಲ, ಗಂಡಿನ ಶಕ್ತಿಯಲ್ಲಿ ಹೆಣ್ಣಿನ ತಾಕತ್ತೂ ಅಡಗಿರುತ್ತದೆ.. ಸತಿ ಶಕ್ತಿ ಎನ್ನುವುದು ನಮ್ಮ ಬದುಕಿನ ಅರ್ಧ ಭಾಗ ಎಂದು ತನ್ನ ರೂಪದಿಂದಲೇ ತಿಳಿಸಿಕೊಟ್ಟವನು ಶಿವ.
ಹೆಣ್ಣೆಂಬುದು ಮಾಯೆ. ಕಂಡಕೂಡಲೇ ಅದರ ಮೋಹಪಾಶಕ್ಕೆ ನೀಳಬಾರದು. ಪರೀಕ್ಷಿಸಿ, ಸ್ಪುಟಗೊಂಡ ನಂತರವೇ ಸ್ವೀಕರಿಸಬೇಕು. ಹಾಗೆ, ಸ್ವೀಕರಿಸಿದ ಬಳಿಕ ಬದುಕಿನುದ್ದಕ್ಕೂ ಕಣ್ಣಿನಂತೆ ರಕ್ಷಿಸಬೇಕು ಎನ್ನುವುದನ್ನು ಶಿವ ಪಾಲಿಸಿ ತೋರಿಸಿದ್ದಾನೆ. ತನ್ನ ನಿರ್ಧಾರದಲ್ಲಿ, ನಡೆಯಲ್ಲಿ, ನುಡಿಯಲ್ಲಿ ಪತ್ನಿ ವಾಕ್ಯಕ್ಕೂ ಗೌರವ ನೀಡಿದವನು ಶಿವ. ಪತ್ನಿಯನ್ನು ಶಿವೆಯಾಗಿಸಿದ್ದು ಇದೇ ಅರ್ಥದಲ್ಲಿ. ಹೆಂಡತಿಯನ್ನು ಮುಡಿಯಲ್ಲಿ ಧರಿಸಿದ ಗಂಡನಿದ್ದರೆ ಅದು ಶಿವ. ಗಂಡ ಕುಡಿದ ವಿಷ ಹೊಟ್ಟೆ ಸೇರದಂತೆ ಗಂಟಲು ಹಿಡಿದದ್ದು ಅನ್ಯೋನ್ಯ ದಾಂಪತ್ಯದ ಗುಟ್ಟು. ಗಂಡ-ಹೆಂಡಿರ ಅನ್ಯೋನ್ಯತೆ ಕೇವಲ ತೋರಿಕೆಯಲ್ಲಿ, ಪ್ರೀತಿಯಲ್ಲಿ ಅಷ್ಟೇ ಅಲ್ಲ. ಆಂತರ್ಯದಲ್ಲೂ ಇರಬೇಕು ಎನ್ನುವುದಕ್ಕೆ ಶಿವ ತತ್ವ ಒಳ್ಳೆಯ ನಿದರ್ಶನ.
5. ಸದಾ ಹೊಸತನದ ಆರಸು
ಶಿವನದ್ದು ಸದಾ ಹೊಸತನದ ಹುಡುಕುವ ಮನಸು. ಬದಲಾವಣೆಗಳಿಗೆ ಹೊಂದಿಕೊಳ್ಳುವ ಮನೋಸ್ಥಿತಿ. ಎಲ್ಲವನ್ನೂ ಸ್ವೀಕರಿಸಿವ ಗುಣ ಆತನದ್ದು ಎನ್ನುವುದಕ್ಕೆ ಸಿಕ್ಕಿದ ಅವಕಾಶಗಳೂ ನಿದರ್ಶನ. ಧರೆಗಿಳಿದ ಗಂಗೆಗೆ ಜಟೆಯನ್ನೇ ಆಧಾರವಾಗಿಸುವ ಕಲ್ಪನೆಯೇ ಅದ್ಭುತ..
ತಪಸ್ಸು ಮಾಡುವ ರಾಕ್ಷಸರಿಗೆ ಎಂಥ ವರವನ್ನೇ ಕೊಟ್ಟರೂ, ಅದರಲ್ಲೊಂದು ಒಳನುಸುಳಿಯನ್ನು ಇಟ್ಟು ದಮನಕ್ಕೆ ಪೂರಕವಾಗುವ ಚಾಣಾಕ್ಷತೆ ಆಧುನಿಕ ನೀತಿ ಪಾಠಗಳಲ್ಲೊಂದು. ಸಪ್ತ ತಾಂಡವಗಳ ಮೂಲಕ ಬದುಕಿನ ನಾನಾ ಮಜಲುಗಳಿಗೆ ನೃತ್ಯ ರೂಪ ಕೊಟ್ಟ ಶಿವ ಖುಷಿಗೂ ಕುಣಿದ, ಸಿಟ್ಟಿಗೂ ಕುಣಿದ.. ಆ ಮೂಲಕ ಜಗತ್ತಿನ ಮೊದಲ ನಾಟ್ಯ ಗುರುವಾದ.
(ವಿವಿಧ ಮೂಲಗಳಿಂದ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post