ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗದ ಮೃಗಾಲಯವನ್ನು ರಾಜ್ಯದ ಮಾದರಿ ಮೃಗಾಲಯವನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.
ಅವರು ಇಂದು ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಮತ್ತು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡುತ್ತಿದ್ದರು. ಈಗಾಗಲೇ ಈ ಮೃಗಾಲಯದ ಅಭಿವೃದ್ಧಿಗೆ 8.10ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಉದ್ದೇಶಿತ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸುಮಾರು 10ಕೋಟಿ ರೂ.ಗಳ ಅಗತ್ಯವಿದ್ದು, ಅದನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಲು ಯತ್ನಿಸಲಾಗುವುದು. ಅದಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಬನ್ನೇರುಘಟ್ಟ, ಮೈಸೂರು, ಹಂಪಿ ಇತ್ಯಾದಿ ಮೃಗಾಲಯಗಳಿಗಿಂತ ಹೆಚ್ಚಿನ ಅಂದರೆ ಸುಮಾರು 650 ಎಕರೆ ಭೂ ವಿಸ್ತೀರ್ಣದಲ್ಲಿ ನೈಸರ್ಗಿಕ ವಾತಾವರಣದಲ್ಲಿ ಮೃಗಾಲಯವಿದೆ. ಇದರ ಸಂಪೂರ್ಣವಾದ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಪ್ರಸುತ ಸರ್ಕಾರದ ಲಭ್ಯ ಅನುದಾನದಲ್ಲಿ ಪ್ರಾಣಿಪಕ್ಷಿಗಳ ರಕ್ಷಣೆಗಾಗಿ ಪ್ರತ್ಯೇಕವಾದ 20 ಸುಸಜ್ಜಿತ ಘಟಕಗಳನ್ನು ಸ್ಥಾಪಿಸಲಾಗಿದೆ. ಇನ್ನು 20 ಘಟಕಗಳ ಸ್ಥಾಪನೆ ಮಾಡುವ ಕಾರ್ಯ ಭರದಿಂದ ಸಾಗಿದೆ. ಕೇಂದ್ರದ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಸ್ಥಳೀಯ ಕೈಗಾರಿಕೋದ್ಯಮಿಗಳು, ದಾನಿಗಳು, ಅಥವಾ ಖಾಸಗಿ ವ್ಯಕ್ತಿಗಳ ಸಹಕಾರ ಪಡೆದು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ದಿನದಂದು ಇಲ್ಲಿನ ಪ್ರಾಣಿಪಕ್ಷಿಗಳನ್ನು ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಪಾಲ್ಗೊಂಡು ಮೃಗಾಲಯದ ಅಭಿವೃದ್ಧಿ ಸಹಕರಿಸಲು ವಿನಂತಿಸಿದರು.
ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆಬಿಡಾರವನ್ನು ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗುವಂತೆ 20ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಂತೆಯೇ ಶಿವಶರಣೆ ಅಕ್ಕiಹಾದೇವಿ ಅವರ ಜನ್ಮಸ್ಥಳ ಉಡುತಡಿಯನ್ನು 30ಕೋಟಿ ರೂ. ವೆಚ್ಚದಲ್ಲಿ ಅಕ್ಷರಧಾಮದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ೨ದಿನಗಳ ಕಾಲ ತಂಗಿದ್ದು, ಪ್ರವಾಸದ ಸವಿ ಅನುಭವಿಸಿ, ಉಲ್ಲಸಿತರಾಗುವಂತೆ ಕ್ರಮ ವಹಿಸಲಾಗುವುದು ಎಂದರು..

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಅವರು ಮಾತನಾಡಿ, ರಾಜ್ಯದ ಈ ಮೃಗಾಲಯವು ವಿಶಾಲವಾದ ಪ್ರದೇಶವನ್ನು ಹೊಂದಿದ್ದು, ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ನೆರೆಯ ರಾಜ್ಯ ಮತ್ತು ದೇಶಗಳಿಂದ ಇನ್ನಷ್ಟು ಪ್ರಾಣಿಪಕ್ಷಿಗಳನ್ನು ತರಲಾಗುವುದು ಎಂದರು.
ಪ್ರಸ್ತುತ ಮೃಗಾಲಯದಲ್ಲಿ 28 ವಿವಿಧ ಪ್ರಾಣಿ ಪಕ್ಷಿಗಳ ಆವರಣಗಳ ಕಾಮಗಾರಿ ಪೂರ್ಣಗೊಂಡಿದೆ. ಕಾಡುಕೋಣ ಸಫಾರಿ ಮತ್ತು ಆವರಣದ ಕಾಮಗಾರಿಯೂ ಪ್ರಗತಿಯಲ್ಲಿದೆ. ಉಳಿದಂತೆ ಇನ್ನೂ 32 ಪ್ರಾಣಿಪಕ್ಷಿಗಳ ಆವರಣಗಳ ಕಾಮಗಾರಿ ನಡೆಸಲು ಕ್ರಮವಹಿಸಲಾಗುವುದು. ಮುಂದಿನ ದಿನಗಳಲ್ಲಿ ತ್ಯಾವರೆಕೊಪ್ಪದಲ್ಲಿ ಸುಸಜ್ಜಿತ ಪಶು ಆಸ್ಪತ್ರೆ, ಕಚೇರಿ ಕಟ್ಟಡ, ಹಾಗೂ ಪ್ರಾಣಿಗಳ ಪುನವರ್ಸತಿ ಕೇಂದ್ರದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕುಂದಚಂದ್ರ, ಎನ್.ಜೆ.ರಾಜಶೇಖರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post