ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಕೃಷಿ ಸಂಬಂಧಿತ ಆ್ಯಪ್ ಗಳು ಮತ್ತು ಯೋಜನೆಗಳ ಬಗ್ಗೆ ಗುಂಪು ಚರ್ಚೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಭಾರತದ ಆರ್ಥಿಕತೆಯ ಮೂಲ ಕೃಷಿಯೇ ಆಗಿದ್ದು, ದೇಶದ ಬಹುಪಾಲು ಜನಸಂಖ್ಯೆ ನೇರವಾಗಿಯೂ ಪರೋಕ್ಷವಾಗಿಯೂ ಕೃಷಿಯ ಮೇಲೆ ಅವಲಂಬಿತವಾಗಿದೆ. ಆದರೆ ಹವಾಮಾನ ಬದಲಾವಣೆ, ಬೆಳೆ ಹಾನಿ, ಮಾರುಕಟ್ಟೆ ಅಸ್ಥಿರತೆ, ಉತ್ಪಾದನಾ ವೆಚ್ಚದ ಏರಿಕೆ ಮತ್ತು ತಾಂತ್ರಿಕ ಕೊರತೆಗಳಂತಹ ಅನೇಕ ಸವಾಲುಗಳು ರೈತರ ಮುಂದಿವೆ. ಈ ಪರಿಸ್ಥಿತಿಯಲ್ಲಿ ರೈತರಿಗೆ ಆರ್ಥಿಕ, ತಾಂತ್ರಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕೃಷಿ ಸಂಬಂಧಿತ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಇಂತಹ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಕೃಷಿ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಅಂತಿಮ ವರ್ಷದ ಕೃಷಿ ವಿದ್ಯಾರ್ಥಿನಿಯಾದ ಮಲ್ಲಮ್ಮರವರು ಕೃಷಿ ಸಂಬಂಧಿತ ಯೋಜನೆಗಳು ಮತ್ತು ಆ್ಯಪ್ ಗಳ ಬಗ್ಗೆ ರೈತರಿಗೆ ಪರಿಚಯ ಮಾಡಿಕೊಟ್ಟರು. ನಂತರ ಕೃಷಿ ಯೋಜನೆಗಳು ರೈತರಿಗೆ ಬೆಳೆ ಉತ್ಪಾದನೆ ಹೆಚ್ಚಿಸಲು, ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಆದಾಯವನ್ನು ಸ್ಥಿರಗೊಳಿಸಲು ನೆರವಾಗುತ್ತವೆ. ಬೀಜ, ರಸಗೊಬ್ಬರ, ನೀರಾವರಿ, ಯಾಂತ್ರೀಕರಣ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ನೇರ ಆದಾಯ ಸಹಾಯ ಮತ್ತು ಮೌಲ್ಯವರ್ಧಿತ ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟರು ಮತ್ತು ಯೋಜನೆಗಳನ್ನು ಪಡೆಯಲು ಬೇಕಾದ ದಾಖಲಾತಿಗಳು, ಅರ್ಹತೆ ಮತ್ತು ಮಾನದಂಡಗಳನ್ನು ರೈತರಿಗೆ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















