ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಲ್ಲೆಗೊಳಗಾದ ರೋಗಿಗಳಿಗೆ ಮೊದಲು ಆರೋಗ್ಯ ಸೇವೆ ಒದಗಿಸಿ, ನಂತರ ಕಾನೂನಿನ ಸೇವೆಗೆ ಸಲಹೆ ನೀಡುವುದು ಆರೋಗ್ಯ ಸಿಬ್ಬಂದಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಸಂತೋಷ್ ತಿಳಿಸಿದರು.
ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇವರ ಸಹಯೋಗದಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣಾ ದಿನ – 2025 ಆಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಆರೋಗ್ಯ ಸೇವೆ ಮತ್ತು ಕಾನೂನಿನ ಸಂಬಂಧಗಳ ಬಗ್ಗೆ ಮಾಹಿತಿ ನೀಡಿದರು.
ಎಲ್ಲರಿಗೂ ಮತ್ತು ಎಲ್ಲೆಡೆಯೂ ಆರೋಗ್ಯ ಸೇವೆ ಎಂಬ ಧ್ಯೇಯದಿಂದ 2012ರಂದು ಯುನೈಟೆಡ್ ನೇಷನ್ಸ್‌ನಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣಾ ದಿನವೆಂದು ಪ್ರಾರಂಭಿಸಲಾಯಿತು. ಅದರ ಸವಿನೆನಪಿಗಾಗಿ ಪ್ರತಿ ವರ್ಷವೂ ಡಿಸೆಂಬರ್ 12ರಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ದಿನವಾಗಿ ಆಚರಿಸುತ್ತೇವೆ ಎಂದರು.
ಜಿಲ್ಲಾ ಕಾನೂನು ಪ್ರಾಧಿಕಾರದಲ್ಲಿ ದೊರೆಯುವ ಉಚಿತ ಕಾನೂನು ಸೌಲಭ್ಯಗಳು ನೊಂದವರಿಗಾಗಿ ದೊರೆಯುವ ಸೌಲಭ್ಯಗಳು, Victim Protection Schemeಗಳ ಬಗ್ಗೆ ಅರಿವು ನೀಡಿದರು.
ಉಚಿತ ಸಹಾಯವಾಣಿಯ 15100 ಬಗ್ಗೆ ಮಾಹಿತಿ ನೀಡಿದಲ್ಲದೆ ಅವರು, ಆರೋಗ್ಯ ಸಿಬ್ಬಂದಿಗಳು ಕಾನೂನಿನ ನಿಬಂಧನೆಗಳನ್ನು ತಿಳಿದುಕೊಳ್ಳುವುದು ಈಗಿನ ಕಾಲಘಟ್ಟದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಟ್ರಸ್ಟ್‌ನ ನಿರ್ದೇಶಕರಾದ ಡಾ. ರಜನಿ ಪೈ ಅವರು ವಹಿಸಿದ್ದರು. ಕಟೀಲ್ ಅಶೋಕ್ ಪೈ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ, ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ, ಪ್ರಾಂಶುಪಾಲರಾದ ಪ್ರೊ. ಮಲ್ಲಿಕಾರ್ಜುನ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪಶ್ರೀ ನಿರೂಪಿಸಿದರು. ಅನುಷ ಸ್ವಾಗತಿಸಿದರು. ಗೀತಾ ವಂದಿಸಿದರು ಹಾಗೂ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















