ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿ ಅಧಿಕಾರಿ ಸಿಬ್ಬಂಧಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯರಿತು ಸದಾ ಎಚ್ಚರಿಕೆಯಿಂದಿದ್ದು ಕಾರ್ಯನಿರ್ವಹಿಸುವಂತೆ ನಿವೃತ್ತ ಎಎಸ್‌ಐ ದಾನಂ ಅವರು ಹೇಳಿದರು.
ಅವರು ಪೊಲೀಸ್ ಇಲಾಖೆಯ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇಲಾಖೆ ಮಾತ್ರವಲ್ಲದೆ ಎಲ್ಲೆಡೆಯಲ್ಲಿಯೂ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.
ನನ್ನ ಸೇವೆಯನ್ನು ಗುರುತಿಸಿ ಇಲಾಖೆಯ ಹಿರಿಯ ಅಧಿಕಾರಿಗಳು ಅನೇಕ ಮಹತ್ವದ ಜವಾಬ್ದಾರಿಗಳನ್ನು ನೀಡಿದರು. ಹಿರಿಯ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನದಿಂದ ಸಹ ಸಿಬ್ಬಂದಿಗಳ ಸಹಕಾರದಿಂದ ನಿರ್ವಹಿಸಿದ ಕಾರ್ಯಗಳಿಗಾಗಿ ಹಲವು ಪುರಸ್ಕಾರ ಲಭಿಸಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.
ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಸಿಬ್ಬಂಧಿಗಳು ಕರ್ತವ್ಯದಲ್ಲಿ ನಿಷ್ಠೆ, ಶಿಸ್ತು , ಬದ್ಧತೆಯೊಂಡಿಗೆ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಅಗತ್ಯವಿರುವ ಸಿಬ್ಬಂಧಿಗಳು ಸೂಕ್ತ ತರಬೇತಿ ಪಡೆದು ಮುಂದುವರೆಯುವಂತೆ ಸಲಹೆ ನೀಡಿದರು.
ಉತ್ತಮವಾಗಿ ಸೇವೆ ಸಲ್ಲಿಸಿ. ಸಮಯ ಪಾಲನೆ ಮಾಡಿ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿ. ಮಾಡುವ ಕಾರ್ಯ ನೆನಪಿನಲ್ಲಿ ಉಳಿಯುವಂತಾಗಲಿ. ವಿಶೇಷವಾಗಿ ಜನರಲ್ಲಿ ವಾಹನ ಚಾಲನೆ, ಸಂಚಾರಿ ನಿಯಮಗಳ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಸ್ಥಾಪಿಸಲಾಗಿರುವ ಪೊಲೀಸ್ ನಿಧಿಯಿಂದ ಜಿಲ್ಲೆಯಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿರುವ ಹಾಗೂ ಅನಾರೋಗ್ಯದಿಂದಿರುವ 66ಜನರಿಗೆ 2ಲಕ್ಷಕ್ಕೂ ಹೆಚ್ಚಿನ ಧನ ಸಹಾಯವನ್ನು ಮಾಡಲಾಗಿದೆ. ಆಲ್ಲದೆ ಮೃತರಾದ 13ಪೊಲೀಸ್ ಕುಟುಂಬಗಳಿಗೆ 1.30ಲಕ್ಷ ಹಣ ನೀಡಿ ಸಹಕರಿಸಲಾಗಿದೆ. ಅಂತೆಯೇ ಪೊಲೀಸ್ ಕುಟುಂಬಗಳ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲಕುಮಾರ ಭೂಮಾರಡ್ಡಿ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post