ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದ್ವಿತೀಯ ಪಿಯುಸಿ ಫಲಿತಾಂಶ Second PU Result ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಶೇ. 83.13 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದೆ. ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕ ಪಡೆದವರ ಸಾಲಿನಲ್ಲಿದ್ದಾರೆ.
ರೈತನ ಮಗಳು ರಾಜ್ಯಕ್ಕೆ ಸೆಕೆಂಡ್ ರ್‍ಯಾಂಕ್ ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಡಿ.ಎನ್. ಅನ್ವಿತಾ D N Anvitha ಅವರು 600ಕ್ಕೆ 596 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಎರಡನೆ ರಾಂಕ್ ಪಡೆದಿದ್ದಾರೆ. ರಾಜ್ಯದಲ್ಲಿ ಒಂಭತ್ತು ವಿದ್ಯಾರ್ಥಿಗಳು 596 ಅಂಕಗಳನ್ನು ಗಳಿಸಿದ್ದಾರೆ.
ಅನ್ವಿತಾ.ಡಿ.ಎ. ಅವರು ತೀರ್ಥಹಳ್ಳಿ ತಾಲೂಕು ಮಲ್ಲೇಸರ ಗ್ರಾಮದವರು. ತಂದೆ ನಾಗರಾಜ ಅವರು ಕೃಷಿಕರು. ತಾಯಿ ಅನುಸೂಯ. ಮಗಳು ರ್‍ಯಾಂಕ್ ಪಡೆದ ವಿಚಾರ ತಿಳಿದು ಖುಷಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅನ್ವಿತಾ.ಡಿ.ಎನ್. ಮಾತನಾಡಿ, ಕಾಲೇಜಿನ ಉಪನ್ಯಾಸಕರು ಬೆಂಬಲವಾಗಿದ್ದರು. ಯಾವುದೆ ಸಂದೇಹಗಳಿದ್ದರೂ ಕೇಳಿದಾಗಲೆ ಅದನ್ನು ಬಗೆಹರಿಸುತ್ತಿದ್ದರು ಎಂದರು.
ಆಯಾ ದಿನದ ಪಾಠಗಳನ್ನು ಅಂದೇ ವರ್ಕ್ ಮಾಡುತ್ತಿದ್ದೆ. ಊರಿನಿಂದ ಓಡಾಡುವುದು ಕಷ್ಟ. ಹಾಗಾಗಿ ವಿಕಾಸ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದೆ. ಅಲ್ಲಿಯೂ ಓದುವ ವಾತಾವರಣ ಇದೆ. ಹಾಗಾಗಿ ಓದಲು ತುಂಬಾ ಅನುಕೂಲವಾಯಿತು. ಹೆಚ್ಚು ಅಂಕ ಪಡೆದ ವಿಚಾರ ತಿಳಿದು ಅಪ್ಪ, ಅಮ್ಮ ತುಂಬಾ ಖುಷಿಯಾಗಿದ್ದಾರೆ. ಮುಂದೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಇದೆ ಎಂದು ತಿಳಿಸಿದರು.
Also read: ಪಿಯು ಫಲಿತಾಂಶ: ಟ್ಯೂಷನ್ ಇಲ್ಲದೇ ಸ್ವಪ್ರಯತ್ನದಿಂದ ಸಾಧಿಸಿದ ಚಾಮರಾಜನಗರದ ವೈಷ್ಣವಿ
ಶಿವಮೊಗ್ಗದ ಕುವೆಂಪು ನಗರದ ಎಸ್.ವಿ.ಇ.ಟಿ. ಸ್ವತಂತ್ರ ಪಿಯು ಕಾಲೇಜಿನ ನೇಹಶ್ರೀ ಅವರು 600 ಅಂಕಗಳಿಗೆ 595 ಅಂಕ ಗಳಿಸಿದ್ದಾರೆ. ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು 13 ವಿದ್ಯಾರ್ಥಿಗಳು ಈ 595 ಅಂಕ ಗಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಸ್.ವಿ.ಇ.ಟಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಉಪನ್ಯಾಸಕರು, ಸಿಬ್ಬಂದಿ ನೇಹಶ್ರೀ ಅವರಿಗೆ ಅಭಿನಂದನೆ ಸಲ್ಲಿಸಿದರು.
ನೇಹಶ್ರೀ ಅವರ ತಂದೆ ಜಯಂತ್‌ಕುಮಾರ್ ಅವರು ಬಿ.ಆರ್.ಪಿಯ ರಾಷ್ಟ್ರೀಯ ಪಿಯು ಕಾಲೇಜಿನ ಎಸ್‌ಡಿಎ ಆಗಿದ್ದಾರೆ. ತಾಯಿ ಚಂದನಾ.ಎಸ್.ಬಿ.
ನೇಹಶ್ರೀ ಅವರ ತಂದೆ ಜಯಂತ್‌ಕುಮಾರ್ ಮಾತನಾಡಿ, ನೇಹಶ್ರೀ ಯಾವುದೇ ಒತ್ತಡವಿಲ್ಲದೆ ನಿತ್ಯ ಓದುತ್ತಿದ್ದಳು. ಅವರ ಶಿಕ್ಷಕರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ. ಮುಂದೆ ಸಿಎ ಓದಬೇಕು ಅಂದುಕೊಂಡಿದ್ದಾಳೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post