ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಗೌರವಯುತವಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ವಿರುದ್ಧ ಸಲ್ಲದ ಮಿಥ್ಯಾರೋಪ ಮಾಡುವ, ಯಾವುದೇ ಸಮಾಜಘಾತಕ ವ್ಯಕ್ತಿ ಅಥವಾ ಶಕ್ತಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದ್ದಾರೆ.
ಅವರು ಇತ್ತೀಚೆಗೆ ಸಾಗರ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಶಿಕ್ಷಕರ ವಿರುದ್ಧ ಆಧಾರರಹಿತವಾಗಿರುವ ಸುಳ್ಳು ಆರೋಪ ಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಿಯಬಿಟ್ಟು ನೌಕರರಿಗೆ ಮಾನಸಿಕವಾಗಿ ನೋವನ್ನುಂಟು ಮಾಡುತ್ತಿರುವ ವ್ಯಕ್ತಿಯ ಚಟುವಟಿಕೆಗಳನ್ನು ಸಂಘಟನೆ ಗಂಭೀರವಾಗಿ ಪರಿಗಣಿಸಿದೆ. ಮಿಥ್ಯಾರೋಪ ಮಾಡುವ ವ್ಯಕ್ತಿಗಳು ಸಂಬಂಧಿಸಿದ ಇಲಾಖೆ ಅಥವಾ ಸಂಬಂಧಿಸಿದ ಮೇಲಾಧಿಕಾರಿಗಳಲ್ಲಿ ದೂರು ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ತಪ್ಪಿದಲ್ಲಿ ಇಂತಹ ಕುತ್ಸಿಕ ಮನಸ್ಥಿತ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಂಘಟನೆ ಸಕಾಲಿಕ ನಿರ್ಧಾರ ಕೈಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.

Also read: ಶಿವಮೊಗ್ಗದಲ್ಲಿ ರಸ್ತೆ ಅಪಘಾತ: ಬೈಕ್ ಸವಾರ ದಾರುಣ ಸಾವು
ಸಾಗರ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ವಿವಿಧ ಕ್ಲಸ್ಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯೋಪಾಧ್ಯಾಯರು, ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲದೆ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುತ್ತಿರುವ ವ್ಯಕ್ತಿಯೊಬ್ಬನ ವಿರುದ್ಧ ನೊಂದ ನೌಕರರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ಸಕ್ಷಮ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದವರು ತಿಳಿಸಿದ್ದಾರೆ.

ಶಿಕ್ಷಕರು ಸೇರಿದಂತೆ ಸರ್ಕಾರದ ಬೇರೆ ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಇಂತಹ ಆರೋಪಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳದಿರುವಂತೆ ಹಾಗೂ ಸಂಘಟನೆಯು ತಮ್ಮ ನೆರವಿಗೆ ಸದಾ ಧಾವಿಸಲಿದೆ ಎಂದು ತಿಳಿಸಿರುವ ಅವರು, ತಮ್ಮ ಕಾರ್ಯಕ್ಷೇತ್ರದಲ್ಲಿ ಸೌಲಭ್ಯಗಳಿಗಾಗಿ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಹಾಗೂ ತ್ವರಿತಗತಿಯ ಸೇವೆ ನೀಡುವಂತೆ ಅವರು ನೌಕರರಲ್ಲಿ ಮನವಿ ಮಾಡಿದ್ದಾರೆ.










Discussion about this post