ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಜಾಪ್ರಭುತ್ವದ ದೇಗುಲ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ಕಾಂಗ್ರೆಸ್ಸಿನ ದುಷ್ಕೃತ್ಯ ಖಂಡನೀಯವಾಗಿದ್ದು, ಬಿಜೆಪಿ ರಾಜ್ಯಾದಾದ್ಯಂತ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಗೂಂಡಾಗಿರಿ ವಿರುದ್ಧ ಮತ್ತು ಸಿಟಿ ರವಿ ಬಂಧನ #C T Ravi Arrest ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸದನದ ಒಳಗಿನ ಘಟನೆಯನ್ನು ಉಲ್ಲೇಖಿಸಿ ದೂರು ಪಡೆದುಕೊಂಡು ಶಾಸಕ ಹಾಗೂ ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿಯವರನ್ನು ಬಂಧಿಸಿರುವ ಕ್ರಮ ಸರಿಯಲ್ಲಿ. ವಿಧಾನಮಂಡಲದ ಘನತೆಯನ್ನು ಮಣ್ಣು ಪಾಲು ಮಾಡಿದೆ. ತುರ್ತು ಪರಿಸ್ಥಿತಿ ಏರಿ ಸಂವಿಧಾನ ವಿರೋಧಿ ಧೋರಣೆ ಅನುಸರಿಸಿದ ಕಾಂಗ್ರೆಸ್ ತನ್ನ ಹತಾಶ ಮನೋಭಾವನೆಯನ್ನು ಪ್ರದರ್ಶಿಸಿದೆ ಎಂದರು.
ಅಂಬೇಡ್ಕರ್ #Ambedkar ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ಸಿಗೆ ಸಂವಿಧಾನಕ್ಕೆ ಗೌರವ ಕೊಡುವ ಮಾನಸಿಕತೆ ಇಲ್ಲ. ಮೊಸಳೆ ಕಣ್ಣೀರು ಸುರಿಸಿ ಸಂವಿಧಾನದ ಕತ್ತು ಹಿಸುಕುವ ತಮ್ಮ ಹಳೆ ಚಾಳಿಯನ್ನು ಕಾಂಗ್ರೆಸ್ ಮುಂದುವರೆಸಿದೆ. ಸದನಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.
Also read: ತರಳಬಾಳು ಹುಣ್ಣಿಮೆಯಲ್ಲಿ ಉಳಿದ ಹಣ ಎಂತಹ ಪುಣ್ಯಕಾರ್ಯಕ್ಕೆ ಬಳಕೆಯಾಗಲಿದೆ ಗೊತ್ತಾ? ಸಿರಿಗೆರೆ ಸ್ವಾಮೀಜಿ ಹೇಳಿದ್ದೇನು?
ಸಂಸತ್‌ನಲ್ಲಿ ರಾಹುಲ್‌ಗಾಂಧಿಯವರು ಬಿಜೆಪಿಯ ಹಿರಿಯ ಸಂಸತ್ ಸದಸ್ಯನನ್ನು ತಳ್ಳಿ ಗಾಯಗೊಳಿಸಿದ್ದಾರೆ. ರಾಹುಲ್‌ಗಾಂಧಿಯನ್ನು ಬಂಧಿಸಿ ಪ್ರಜಾತಂತ್ರಕ್ಕೆ ಅಪಮಾನಿಸಿದ ಅವರನ್ನು ಮಂಪರ್ ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಮೂಡಾ, ವಾಲ್ಮೀಕಿ ಹಗರಣಗಳ ಸರಮಾಲೆಯಲ್ಲಿ ಸಿಲುಕಿದ ಸರ್ಕಾರ ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಪ್ರಕರ ಹಿಂಧುತ್ವವಾದಿ ಸಿ.ಟಿ.ರವಿ ಮೇಲೆ ಹಲ್ಲೆ ನಡೆಸಲು ಮುಂದಾಗಿದೆ. ರಾಜ್ಯಪಾಲರು ಕೂಡಲೇ ಮಧ್ಯೆ ಪ್ರವೇಶಿಸಿ ಸಚಿವೆ ಹೆಬ್ಬಾಳಕರ್ ಅವರ ಪಿಎಯನ್ನು ಅಮಾನತ್ತು ಮಾಡಬೇಕು. ಮತ್ತು ಭಯೋತ್ಪಾದಕರಂತೆ ಎಳೆದುಕೊಂಡು ಹೋಗಿ ಕೊಲೆಗಾರನಂತೆ ದಬ್ಬಾಳಿಕೆ ನಡೆಸಿದ ಯಾರದೋ ಅಣತಿಯಂತೆ ವರ್ತಿಸಿದ ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಚನ್ನಬಸಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಸಿ.ಟಿ.ರವಿಯ ಅವರ 40 ವರ್ಷದ ಒಡನಾಟ ನನಗಿದೆ. ನಾನು ಕೂಡ ಸದನದಲ್ಲಿದ್ದೆ. ಸಚಿವರ ಹಿಂಬಾಲಕರು ಸದನದ ಒಳಗೆ ನುಗ್ಗಿ ಮಾಡಿದ ಗೂಂಡಾ ವರ್ತನೆಯನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು.
ಶಾಸಕ ಡಾ.ಸರ್ಜಿ ಮಾತನಾಡಿ ಚಿಂತಕರ ಚಾವಡಿ ಎಂದೆನ್ನಿಸಿದ ವಿಧಾನಪರಿಷತ್ತನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ. ಅಂಬೇಡ್ಕರ್ ಮತ್ತು ಗಾಂಧಿಜಿಯ ಹೆಸರನ್ನು ಮತಕ್ಕಾಗಿ ದುರ್ಬಳಕೆ ಮಾಡಿಕೊಂಡು ಬಂದ ಕಾಂಗ್ರೆಸ್. ನಾಚಿಕೆ ಮಾನ ಮಾರ್ಯಾದೆ ಬಿಟ್ಟು ಒಬ್ಬ ಜನಪ್ರತಿನಿಧಿಯ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸುವ ಷಂಡತನ ಮಾಡಿದೆ ಎಂದರು.
ನಾವು ಯಾವುದಕ್ಕೆ ಜಗ್ಗಲ್ಲ, ಬಗ್ಗಲ್ಲ, ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ , ಈ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಎಸ್.ದತ್ತಾತ್ರಿ, ಮೋಹನ್‌ರೆಡ್ಡಿ, ಹರೀಶ್, ಜಗದೀಶ್, ಶಾಂತ ಸುರೇಂದ್ರ, ಸುರೇಖಾ ಮುರಳೀಧರ್,ರತ್ನಾಕರ್ ಶೆಣೈ, ಕೆ.ಜಿ.ಕುಮಾರಸ್ವಾಮಿ, ರಶ್ಮಿ ಶ್ರೀನಿವಾಸ್, ಚೈತ್ರ ನಾಯಕ್, ರಮೇಶ್, ಜ್ಞಾನೇಶ್ವರ್, ಚಂದ್ರಶೇಖರ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post