ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ವಾಸವಿ ಪಬ್ಲಿಕ್ ಶಾಲೆ, ನಂದನ ಎಜುಕೇಷನಲ್ ಟ್ರಸ್ಟ್, ವಿಕಾಸ ವಿದ್ಯಾಸಂಸ್ಥೆ, ಫೇಸ್ ಪದವಿಪೂರ್ವ ಕಾಲೇಜು, ಮುಂತಾದ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆ.14 ಮತ್ತು 15ರಂದು ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಸಂಭ್ರಮದ “ಅಭಿಮಾನ ಪರ್ವ” ಎಂಬ ಕಾರ್ಯಕ್ರಮವನ್ನು ಗಾಂಧಿಬಜಾರಿನಲ್ಲಿ ಆಚರಿಸಲಾಗುವುದು ಎಂದು ಆಚರಣೆಯ ಸಂಚಾಲಕ ಶೇಷಾಚಲ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ರಾಷ್ಟ್ರಾಭಿಮಾನದ ಹೆಮ್ಮೆಯ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬ ನಾಗರೀಕನು ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದ ಅಂಗವಾಗಿ ಅಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಾಸವಿ, ವಿಕಾಸ, ಪೇಸ್, ನಂದನ, ಅಯ್ಯಪ್ಪಸ್ವಾಮಿ, ಆಕ್ಸ್‍ಫಡ್, ಓಪನ್‍ಮೈಂಡ್, ಡೆಲ್ಲಿ ವರ್ಡ್ ಸೇರಿದಂತೆ ಹಲವು ಶಾಲೆಯ ಮಕ್ಕಳು ಭಾಗವಹಿಸಲಿದ್ದಾರೆ. ಹಾಗೆಯೇ ಜೈನ್ ಸಮುದಾಯ, ವಿಷ್ಣು ಸಮಾಜ, ದೈವಜ್ಞ ಸಮಾಜ, ಗಾಂಧಿಬಜಾರ್ ವರ್ತಕರ ಸಂಘ, ರಾಷ್ಟ್ರಭಕ್ತರ ಬಳಗ, ಭಾವುಸಾರ ಕ್ಷತ್ರೀಯ ಸಮಾಜ, ರೋಟರಿ ಮಿಡ್‍ಟೌನ್, ಆರ್ಯವೈಶ್ಯ ಮಹಾಜನ ಸಮಿತಿ, ವಾಸವಿ ವಿದ್ಯಾಲಯ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಭಾಗವಹಿಸಲಿವೆ ಎಂದರು.
ಕಾರ್ಯಕ್ರಮದಲ್ಲಿ ಆ.14ರಂದು ಗಾಂಧಿಬಜಾರಿನ ಎಲ್ಲಾ ವರ್ತಕರ ಅಂಗಡಿಗಳು ಮತ್ತು ಮನೆಗಳ ಮೇಲೆ ಧ್ವಜಗಳನ್ನು ಕಟ್ಟಲಾಗುತ್ತದೆ. ಹೀಗೆ ಕಟ್ಟಲಾದ ಧ್ವಜಗಳನ್ನು 15ರಂದು ಹಾರಿಸಲಾಗುವುದು. 15ರ ಸಂಜೆ ಧ್ವಜಗಳನ್ನು ತೆರವುಗೊಳಿಸಲಾಗುವುದು ಪ್ರತಿಯೊಬ್ಬರು ಪ್ಲಾಸ್ಟಿಕ್ ಧ್ವಜಗಳನ್ನು ಹಾರಿಸಬಾರದು. ಖಾದಿ ಧ್ವಜವನ್ನೇ ಹಾರಿಸಬೇಕು ಎಂದು ಮನವಿ ಮಾಡಿದರು.
ಸಂಜೆ 3 ಗಂಟೆಗೆ 2 ರಿಂದ 7 ವರ್ಷದ ಮಕ್ಕಳು ದೇಶಭಕ್ತರ ವೇಷಭೂಷಣವನ್ನು ತೊಟ್ಟು ಪಥಸಂಚಲನ ಮಾಡಲಿದ್ದಾರೆ. ಶಿವಪ್ಪನಾಯಕನ ಪ್ರತಿಮೆಯಿಂದ ಇದು ಆರಂಭವಾಗುತ್ತದೆ. ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿನ ಮಕ್ಕಳು ಮತ್ತು ನಾಗರೀಕರು ರಾಮಣ್ಣ ಶ್ರೇಷ್ಠಿಪಾರ್ಕ್‍ನಿಂದ ಪಥ ಸಂಚಲನ ಆರಂಭಿಸುವರು. ಇಡೀ ಗಾಂಧಿಬಜಾರಿನ ಪ್ರತೀ ಕ್ರಾಸಿನಲ್ಲಿ ಒಟ್ಟು 10 ವೇದಿಕೆಗಳನ್ನು ನಿರ್ಮಿಸಲಾಗಿರುತ್ತದೆ. ಈ ಹತ್ತು ವೇದಿಕೆಗಳಲ್ಲೂ ಏಕ ಕಾಲದಲ್ಲಿ ಏಕ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆ 5 ಗಂಟೆಯಿಂದ ಭಿತ್ತರಗೊಳ್ಳುತ್ತವೆ. ಆಯಾ ವೇದಿಕೆಯಲ್ಲಿರುವವರು ಆ ಗಾಯನಕ್ಕೆ ನೃತ್ಯ ಮಾಡುವರು. ಒಟ್ಟಾರೆ ಈ ಕಾರ್ಯಕ್ರಮದಲ್ಲಿ ಮಕ್ಕಳು, ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಸಾವಿರಾರು ಜನರು ಆಗಮಿಸಲಿದ್ದಾರೆ. ಇದೊಂದು ಅಪೂರ್ವ ಸ್ವಾತಂತ್ರ್ಯೋತ್ಸವ ಆಗಲಿದೆ ಎಂದರು.
ರಾಷ್ಟ್ರಭಕ್ತ ಬಳಗದ ಕೆ.ಈ. ಕಾಂತೇಶ್ ಮಾತನಾಡಿ, ಇದೊಂದು ಅಪೂರ್ವ ಕಾರ್ಯಕ್ರಮವಾಗಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ನಮ್ಮ ಯೋಧರ ಪಾತ್ರ ಭಾರತ ದೇಶದ ಪ್ರಗತಿ, ಯೋಗ ದಿನಾಚರಣೆ, ಪ್ರಧಾನಿಯವರ ಪ್ರೇರಣೆ ಈ ಎಲ್ಲವನ್ನು ಒಟ್ಟುಗೂಡಿಸಿ ಈ ಕಾರ್ಯಕ್ರಮವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದೇವೆ. ವಿವಿಧ ಶಾಲೆಯ ನೂರಾರು ಪುಟಾಣಿ ಮಕ್ಕಳನ್ನು ರಾಷ್ಟ್ರಭಕ್ತರ ವೇಷಭೂಷಣದಲ್ಲಿ ನೋಡುವುದೇ ಕಣ್ಣಿಗೆ ಒಂದು ಹಬ್ಬವಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಚಿವ ಮಧುಬಂಗಾರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಧನಂಜಯ ಸರ್ಜಿ ಮುಂತಾದವರು ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ, ಮಹಾಲಿಂಗಯ್ಯ ಶಾಸ್ತ್ರೀ, ಗಜೇಂದ್ರನಾಥ್, ಗುರುದೇವ್, ಮಂಜುನಾಥ್, ಉಮೇಶ್ ಆರಾಧ್ಯ, ಟಿ.ಆರ್. ಅಶ್ವತ್ಥ್‍ನಾರಾಯಣ ಶೆಟ್ಟಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post