ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ “ಶಿವಮೊಗ್ಗ ದಸರಾ – 2025″ರ #Shivamogga Dasara ಅಂಗವಾಗಿ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ “ಪರಿಸರ ದಸರಾ” ಕಾರ್ಯಕ್ರಮಕ್ಕೆ ಇಂದು ಮಹಾನಗರ ಪಾಲಿಕೆಯ ಆವರಣದಲ್ಲಿ ಪರಿಸರವಾದಿ ಡಾ. ಶ್ರೀಪತಿ ಎಲ್.ಕೆ. ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಸಂಕೇತವಾಗಿ ಆಯೋಜಿಸಲಾಗಿದ್ದ “ಸೈಕಲ್ ಜಾಥಾ”ವನ್ನು ಉದ್ಘಾಟಿಸಿದ ಶಾಸಕ ಚನ್ನಬಸಪ್ಪ ಮಾತನಾಡಿ, ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಬಳಸುವಂತೆ ನಾಗರೀಕರಲ್ಲಿ ತಿಳಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರಾಸಕ್ತರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಸೈಕಲ್ ಜಾಥಾದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಪಾಲಿಕೆ ಆವರಣದಿಂದ ಮಹಿಳಾ ಪಾಲಿಟೆಕ್ನಿಕ್ ವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಮುಖ್ಯ ಅತಿಥಿಗಳು ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಸಸಿ ನೆಟ್ಟರು. ಈ ಸಂದರ್ಭದಲ್ಲಿ ಕಳೆದ 30 ವರ್ಷಗಳಿಂದ ತಮ್ಮ ಕಿರಾಣಿ ಅಂಗಡಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ ಶಾಪ್ ಎನ್ ಸೇವ್ ಮಾಲೀಕರಾದ ವಿಕ್ರಂ ಮತ್ತು ಅಶ್ವತ್ಥ್ ನಾರಾಯಣ್, ಮೆಕ್ಕೆಜೋಳದಿಂದ ಪರಿಸರ ಸ್ನೇಹಿ ಕೈಚೀಲ ತಯಾರಿಸುವ ಹರಿಹರಪುರದ ಪುನರ್ವಸು ಸಂಸ್ಥೆಯ ಗಾಯತ್ರಿ, ಪೇಪರ್ ನಿಂದ ಪೆನ್, ಪೆನ್ಸಿಲ್ ತಯಾರಿಸಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಹರಿಹರದ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಸಂತೋಷ್ ಕುಮಾರ್, ಆಯುಕ್ತ ಮಾಯಣ್ಣ ಗೌಡ, ಪ್ರೊ. ಬಿ.ಎಂ. ಕುಮಾರಸ್ವಾಮಿ, ಎಂ. ಶಂಕರ್, ವಾಗೀಶ್, ಪರಿಸರ ನಾಗರಾಜ್, ಅನಾ ವಿಜಯೇಂದ್ರರಾವ್, ವಿಜಯಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶಿಲ್ಪಾ., ಶಾಲಾ ಕಾಲೇಜು ವಿದ್ಯಾರ್ಥಿಗಳು, ಸೈಕಲ್ ಕ್ಲಬ್ ಸದಸ್ಯರು, ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















