ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸರ್ಕಾರ ಜೀವರಕ್ಷಕ ಅಗತ್ಯ ಔಷಧಿಗಳ ಬೆಲೆಯನ್ನು ಏರಿಸಿರುವುದು ಖಂಡನೀಯ. ಕೂಡಲೇ ಅದನ್ನು ವಾಪಾಸು ತೆಗೆದುಕೊಳ್ಳಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಆಗ್ರಹಿಸಿದೆ.
ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಧ್ಯಯನ ಕೇಂದ್ರದ ಮುಖಂಡ ಕಲ್ಲೂರು ಮೇಘರಾಜ್ ಕೇಂದ್ರ ಸರ್ಕಾರ ಇಂದಿನಿಂದ ಜಾರಿಗೆ ಬರುವಂತೆ ನೋವು ನಿರೋಧಕ, ಹೃದಯ, ಮಧುಮೇಹ, ಮಲೇರಿಯಾ ಸೇರಿದಂತೆ ಸುಮಾರು 384 ಜೀವರಕ್ಷಕ ಅಗತ್ಯ ಔಷಧಿಗಳ ಬೆಲೆಯನ್ನು ಶೇ.12.12ಕ್ಕೆ ಏರಿಕೆ ಮಾಡಿದೆ. ಬಡವರ ಬದುಕಿನ ಮೇಲೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ತಯಾರಿಸಲಾಗುವ ಔಷಧಿಗಳ ಕಚ್ಛಾ ವಸ್ತುಗಳಿಗೆ ವಿದೇಶಗಳನ್ನೇ ಅವಲಂಬಿಸಿರುವುದು ಸರಿಯಲ್ಲ. ಸುಮಾರು ಶೇ.60ರಷ್ಟು ವಿದೇಶಿ ಕಚ್ಛಾ ವಸ್ತುಗಳನ್ನೇ ದೇಶೀಯವಾಗಿ ಎಪಿಐಗಳ ತಯಾರಿಕೆಯಲ್ಲಿ ಬಳಸುತ್ತಿದ್ದೇವೆ. ಕೇಂದ್ರ ಸರ್ಕಾರ ಎಪಿಐ ಕಚ್ಚಾ ವಸ್ತು ತಯಾರಿಕೆಗೆ ಸಬ್ಸಿಡಿ ಹಾಗೂ ಉತ್ತೇಜನ ನೀಡುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಔಷಧಿ ತಯಾರಿಕಾ ಕಂಪನಿಗಳಿಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಸದಸ್ಯೆ ಡಾ. ನೇತ್ರಾವತಿ ಮಾತನಾಡಿ, ಕೇಂದ್ರ ಸರ್ಕಾರದ ಈ ಕ್ರಮ ಸರಿಯಲ್ಲ. ಭಾರತದಲ್ಲಿ ಈಗ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಬಡ ಜನರು ಪ್ರತಿ ತಿಂಗಳು ಸಾವಿರಾರು ರೂ ಖರ್ಚು ಮಾಡುತ್ತಿದ್ದಾರೆ ಔಷಧಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಸಂಕಟಕ್ಕೆ ಒಳಗಾಗುತ್ತಾರೆ. ಕೇಂದ್ರ ಸರ್ಕಾರದ ಜನೌಷಧಿ ಇದ್ದರೂ ಕೂಡ ಅಲ್ಲಿ ಎಲ್ಲಾ ಔಷಧಿಗಳು ಸಿಗುತ್ತಿಲ್ಲ ಮತ್ತು ಆ ಕೇಂದ್ರಗಳು ತುಂಬಾ ವಿರಳವಾಗಿವೆ. ಕೇಂದ್ರ ಸರ್ಕಾರ ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಸಿದೆ. ಈಗ ಔಷಧಿಗಳ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರದ ನಾಗರತ್ನ, ಪುಷ್ಪಲತಾ, ಬಿ. ಲಿಂಗರಾಜು, ಶಂಕ್ರಾ ನಾಯ್ಕ, ಕೊಡ್ಲೂರು ಶ್ರೀಧರ್, ರಾಮಕೃಷ್ಣ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















