ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶೈಕ್ಷಣಿಕ ವೇಳಾಪಟ್ಟಿಗೆ ಸೀಮಿತವಾಗದೆ ಕಾರ್ಪೊರೇಟ್ ವಲಯಕ್ಕೆ ತಕ್ಕಂತಹ ಇಂಜಿನಿಯರ್ ಗಳಾಗಿ ರೂಪಗೊಳ್ಳುವತ್ತ ಯೋಜಿಸಿ ಎಂದು ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ವಿಜಯಕುಮಾರ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಿಇಟಿ/ಕಾಮೆಡ್ – ಕೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಪ್ರತಿ ವರ್ಷ 13 ಲಕ್ಷ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗುತ್ತಿದೆ. ಅದರಲ್ಲಿ 3 ಲಕ್ಷ ಜನಕ್ಕೆ ಮಾತ್ರ ಉದ್ಯೋಗವಕಾಶ ಸಿಗುತ್ತದೆ. ಕಾಲೇಜಿನ ಪ್ಲೇಸ್ಮೆಂಟ್ ಸಂದರ್ಭದಲ್ಲಿ ಉದ್ಯೋಗ ನೀಡುವ ಸಂಸ್ಥೆಗಳು, ಕೌಶಲ್ಯತೆಯ ಆಧಾರದಲ್ಲಿ ಉದ್ಯೋಗ ನೀಡುತ್ತೇವೆ ವಿನಃ, ನಿಮ್ಮ ಅಂಕ ಪಟ್ಟಿ ನಮಗೆ ಬೇಡ ಎಂದು ಸ್ಪಷ್ಟವಾಗಿ ಹೇಳಿಬಿಡುತ್ತದೆ.
ಇಂದಿನ ಕಾರ್ಪೊರೇಟ್ ವಲಯ, ಪದವೀಧರ ಯುವ ಸಮೂಹದಿಂದ ಕೌಶಲ್ಯಾಧಾರಿತ ವ್ಯಕ್ತಿತ್ವ ಬಯಸುತ್ತಿದ್ದೆ, ಅದರೆ ಪೋಷಕರು ಕೇವಲ ಕೋರ್ಸ್ ಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಎಲ್ಲಾ ಕೋರ್ಸುಗಳು ತನ್ನದೇ ಆದ ವಿಫುಲ ಅವಕಾಶ ಹೊಂದಿದ. ಕೆಲವೇ ಕೋರ್ಸ್ ಗಳಿಂದ ಭವಿಷ್ಯ ಸಾಧ್ಯ ಎಂಬ ಭ್ರಮೆ ಬೇಡ.
ಪಕ್ಕದ ಮನೆಯವರು ನಮಗೆ ಪ್ರೇರಣೆಯಲ್ಲ. ನಮ್ಮಲ್ಲಿರುವ ಕೌಶಲ್ಯತೆ ಗುಣಲಕ್ಷಣಕ್ಕೆ ತಕ್ಕಂತೆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ. ಮುಂದೆ ಉದ್ಯೋಗ ಸಂಸ್ಥೆಗಳು ನಿಮ್ಮ ಬಯೋಡೆಟಾ ಕೇಳುವುದಿಲ್ಲ, ವಿದ್ಯಾರ್ಥಿ ಜೀವನದಲ್ಲಿ ರೂಪಿಸಿದ ನಾವೀನ್ಯ ಉತ್ಪನ್ನಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ.
ಪಿಯು ಪರೀಕ್ಷೆ ನಂತರ ಇಂಜಿನಿಯರಿಂಗ್ ಪ್ರವೇಶಾತಿ ಪಡೆದು ತರಗತಿಗಳು ಪ್ರಾರಂಭವಾಗುವ ಹೊತ್ತಿಗೆ ಸುಮಾರು ಐದು ತಿಂಗಳ ಕಾಲಾವಕಾಶ ಸಿಗುತ್ತದೆ. ಅಂತಹ ಅವಕಾಶಗಳನ್ನು ನಾವೀನ್ಯತೆಗೆ ಪೂರಕವಾಗಿರುವ ಕಾಲೇಜು ಕೋರ್ಸ್‌ಗಳನ್ನು ಹುಡುಕಲು ಬಳಸಿಕೊಳ್ಳಿ.
ಇಂಜಿನಿಯರಿಂಗ್ ನಲ್ಲಿ ಪಡೆಯುವ 8 ಅಂಕ ಪಟ್ಟಿಗಳ ಜೊತೆಗೆ, ನಿಮ್ಮ ಕೌಶಲ್ಯತೆಗೆ ಅನುಗುಣವಾದ 8 ಬಾಹ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಶ್ರಮಿಸಿ. ಅದರಲ್ಲಿ ಕಲೆ, ಸಾಂಸ್ಕೃತಿಕ, ನಾವೀನ್ಯ ವಿಚಾರಗಳು ಒಳಗೊಂಡಿರಲಿ ಎಂದು ಸಲಹೆ ನೀಡಿದರು.
ಸಿಇಟಿ ಹಾಗೂ ಕಾಮೆಡ್ ಕೆ ಕುರಿತ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ನರೇಂದ್ರ ವಿಶೇಷ ಮಾಹಿತಿ ನೀಡಿದರು.
ಶಿಕ್ಷಣ ತಜ್ಞರ ಟಿಪ್ಸ್ :
- ಆಪ್ಷನ್ ಎಂಟ್ರಿ ಮಾಡುವ ಮುನ್ನ ಕೆಇಎ ನೀಡುವ ಸೀಕ್ರೆಟ್ ಕೀ ಭದ್ರವಾಗಿ ಕಾಪಾಡಿಕೊಳ್ಳಿ.
- ಪ್ರತಿದಿನ ಕೆಇಎ ವೆಬ್ಸೈಟ್ ಭೇಟಿ ನೀಡಿ ಹೊಸ ಪ್ರಕಟಣೆಗಳ ಬಗ್ಗೆ ತಿಳಿದುಕೊಳ್ಳಿ.
- ಕಾಲೇಜುಗಳ ಮಾನ್ಯತೆ, ಬೋಧನಾ ಕ್ರಮ, ಉದ್ಯೋಗವಕಾಶ, ಹಾಸ್ಟಲ್ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಿ.
- ಕೋರ್ಸ್ ಮುಖ್ಯವೊ ಕಾಲೇಜು ಮುಖ್ಯವೊ ಎಂದು ಈಗಲೇ ನಿರ್ಧರಿಸಿಕೊಳ್ಳಿ.
- ಕೆಇಎ ವೆಬ್ಸೈಟ್ ಮೂಲಕ ಹಿಂದಿನ ವರ್ಷಗಳ ಕಾಲೇಜು ಮತ್ತು ಕೋರ್ಸ್‌ಗಳ ಕಟ್‌ಆಫ್ ತಿಳಿಯಿರಿ.
- ಸೀಟ್ ಮ್ಯಾಟ್ರಿಕ್ಸ್ ಗಳ ಬಗ್ಗೆ ತಿಳಿದುಕೊಳ್ಳಿ.
- ಶುಲ್ಕ ಪಾವತಿಸುವ ಚಲನ್‌ಗಳನ್ನು ನಿಮ್ಮ ಖಾತೆ ಯಿರುವ ಬ್ಯಾಂಕ್‌ಗಳಿಂದ ಪಾವತಿಸಿ.
- ಕೆಇಎ ನೀಡುವ ಕಾಲೇಜು ಪ್ರವೇಶಾತಿ ಆದೇಶ ಮರೆಯದೆ ಡೌನ್‌ಲೋಡ್ ಮಾಡಿಕೊಳ್ಳಿ.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಪ್ರವೇಶಾತಿ ಸಮಿತಿ ಮುಖ್ಯಸ್ಥರಾದ ಡಾ. ಸುರೇಂದ್ರ, ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮೋಯಿನುದ್ದಿನ್ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಆಡಳಿತ ವಿಭಾಗದ ಎನ್.ಜಿ.ಸತೀಶ್ ಪ್ರಾರ್ಥಿಸಿ, ಹೇಮಲತ.ಎನ್.ಎಸ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post