ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಡಿಕೆ ಹಾಳೆಯ ಉತ್ಪನ್ನಗಳಿಗೆ ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಪ್ರಮಾಣೀಕರಣ ದೊರೆತರೆ ಈ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ, ಆದಾಯ ದೊರಕುವುದರೊಂದಿಗೆ ಮೌಲ್ಯ ಹೆಚ್ಚುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ತಿಳಿಸಿದರು.
ಭಾರತೀಯ ಮಾನಕ ಬ್ಯುರೋ (ಬಿಐಎಸ್) BES ಧಾರವಾಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಜಿಲ್ಲಾ ಅಡಿಕೆ ಹಾಳೆ ಉತ್ಪನ್ನಗಳ ತಯಾರಕರು ಮತ್ತು ಮಾರಾಟಗಾರರ ಸಂಘದ ಸಹಭಾಗಿತ್ವದಲ್ಲಿ ಇಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಆಯೋಜಿಸಲಾಗಿದ್ದ ‘ಅಡಿಕೆ ಹಾಳೆ ಉತ್ಪನ್ನಗಳ ಪ್ರಮಾಣಿಕರಣದ ಮಹತ್ವ’ ಕುರಿತಾದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Also read: ಶಿವಮೊಗ್ಗದ ಪ್ರತಿಷ್ಟಿತ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ಬಾಡಿಗೆಗೆ ಲಭ್ಯ
ಅಡಿಕೆ ಹಾಳೆಯಿಂದ ತಯಾರಾಗುವ ಪ್ಲೇಟ್ ಇತರೆ ಉತ್ಪನ್ನಗಳನ್ನು ನಾವು ಯಾವುದೇ ಮಾನದಂಡ, ಪ್ರಮಾಣೀಕರಣ ಇಲ್ಲದೆ ಮಾಡುತ್ತಿದ್ದೇವೆ. ಇಂತಹ ಬೇಡಿಕೆಯ ಉತ್ಪನ್ನಕ್ಕೆ ಬಿಐಎಸ್ ಪ್ರಮಾಣೀಕರಣ ದೊರೆತರೆ ಉತ್ಪನ್ನದ ಮೌಲ್ಯವರ್ಧನೆಯಾಗಿ ಆದಾಯವೂ ಹೆಚ್ಚುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಬಿಐಎಸ್ ಮಾನದಂಡ ಅಳವಡಿಸಿಕೊಂಡು ವಿಶ್ವದರ್ಜೆಯ ಅಡಿಕೆ ಹಾಳೆ ಉತ್ಪನ್ನಗಳನ್ನು ತಯಾರಿಸೋಣ ಎಂದು ಹೇಳಿದರು.

ಹಲವಾರು ರೈತರು ಮನೆಯಲ್ಲಿಯೇ ಅಡಿಕೆ ಹಾಳೆಗಳಲ್ಲಿ ಪ್ಲೇಟ್ ಇತರೆ ಉತ್ಪನ್ನಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರುತ್ತಿದ್ದಾರೆ. ನಾವು ಗುಣಮಟ್ಟದ ಪ್ರಜ್ಞೆಯನ್ನು ಬೆಳೆಸಿಕೊಂಡಲ್ಲಿ ಉತ್ತಮ ಆದಾಯ ಪಡೆಯಬಹುದು. ವಿಶ್ವಾಸ, ನಂಬಿಕೆ ಗಳಿಸಿ ಪ್ರಪಂದಾದ್ಯಂತ ಉತ್ತಮ ಬ್ರಾಂಡ್ ಆಗಬೇಕು ಎಂದರು.

ಜಿಲ್ಲಾ ಅಡಿಕೆ ಹಾಳೆ ಉತ್ಪನ್ನಗಳ ತಯಾರಕರ ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ ಜಿ ಮಾತನಾಡಿ, ಅಡಿಕೆ ಹಾಳೆ ಉತ್ಪನ್ನಗಳ ತಯಾರಿಕೆ ದಕ್ಷಿಣ ಭಾರತದಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ನಡೆಯುತ್ತಿದೆ. ಈ ಉದ್ಯಮವನ್ನು ಅತ್ಯಂತ ಪರಿಶ್ರಮ ಹಾಕಿ ಬೆಳೆಸುತ್ತಾ ಇದ್ದೇವೆ. ಆದರೆ ಇನ್ನೂ ಅನೇಕ ಸವಾಲುಗಳಿವೆ. ಇಂತಹ ಉತ್ಪನ್ನಕ್ಕೆ ಭಾರತೀಯ ಮಾನಯ ಬ್ಯೂರೋ ಪ್ರಮಾಣೀಕರಣ ನೀಡುವ ಕುರಿತು ಆಯೋಜಿಸಿರುವ ಈ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದ್ದು, ಇದರ ಸದುಪಯೋಗವನ್ನು ಎಲ್ಲ ಉತ್ಪಾದಕರು ಪಡೆಯಬೇಕೆಂದರು.,

ಮಾನಕ, ಮೌಲ್ಯವರ್ಧನ ತರಬೇತುದಾರ ಎಂ.ಮಹಮದ್ ಮಾತನಾಡಿ, ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಬಿಐಎಸ್ ಕಾರ್ಯಚಟುವಟಿಕೆ ಕುರಿತು ತಿಳಿಸಿದರು. ಸುಮಾರು 22521 ಉತ್ಪನ್ನಗಳಿಗೆ ಸ್ಟ್ಯಾಂಡರ್ಡ್ ನೀಡಲಾಗಿದೆ, 41189 ಉತ್ಪನ್ನಗಳಿಗೆ ಅಧಿಕೃತ ಪರವಾನಗಿ ನೀಡಲಾಗಿದೆ. ಬಿಐಎಸ್ ಕುರಿತು ಶಾಲೆಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ ಜಾಗೃತಿ ಮತ್ತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ತಿಂಗಳಿಗೊಂದು ಮಾನಕ್ ಮಂಥನ್ ಕಾರ್ಯಕ್ರಮ ನಡೆಸಲಾಗುತ್ತಿದೆ.

ಬಿಐಎಸ್ ಹಾಲ್‍ಮಾರ್ಕ್ ನೈಜತೆ ಬಗ್ಗೆ ತಿಳಿಯಲು ಮತ್ತು ಬಿಐಎಸ್ ಪ್ರಮಾಣಿಕೃತ ಉತ್ಪನ್ನದ ಬಗ್ಗೆ ತಿಳಿಯಲು ಬಿಐಎಸ್ ಕೇರ್ ಆ್ಯಪ್ ನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಪರೀಕ್ಷಿಸಿ ಮಾಹಿತಿ ಪಡೆಯಬಹುದು ಎಂದರು.
ಬಿಐಎಸ್ ಹುಬ್ಬಳ್ಳಿ ವಿಜ್ಞಾನಿ ಮರ್ಸಿರಾಣಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಗುಣಮಟ್ಟದ ಮಾನದಂಡಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಹಾಗೂ ಬಿಐಎಸ್ ಹುಬ್ಬಳ್ಳಿಯ ಸಂಪನ್ಮೂಲ ವ್ಯಕ್ತಿ ಎಂ.ಎಂ ಜಯಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಿಜಯ್ ಕುಮಾರ್, ಇತರೆ ಪದಾಧಿಕಾರಿಗಳು, ಅಡಿಕೆ ಹಾಳೆ ಉತ್ಪನ್ನ ತಯಾರಕರು, ರಫ್ತುದಾರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post