ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಕ್ಕಳಿಗೆ ನಾವು ನೀಡುವ ಶಿಕ್ಷಣವೇ ಅವರಿಗೆ ನಾವು ಕೊಡಬಹುದಾದ ದೊಡ್ಡ ಆಸ್ತಿ ಎಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ. ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ 500ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ತಾಲೂಕು ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕೇವಲ ಆಸ್ತಿ ಮಾಡುವುದು ಮುಖ್ಯವಲ್ಲ. ಆ ಆಸ್ತಿಯನ್ನು ಉಳಿಸಿ, ಬೆಳೆಸಿಕೊಳ್ಳುವುದು ಹೇಗೆ ಎಂಬ ಜ್ಞಾನ ಜಾಗೃತವಾಗಲು ಶಿಕ್ಷಣ ಅತಿ ಮುಖ್ಯ ಎಂದರು.
ಬಡ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ವಿದ್ಯಾಗಮ ಯೋಜನೆ ಸ್ಥಗಿತಗೊಂಡಿರುವುದು ಬೇಸರದ ವಿಚಾರ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಮತ್ತೊಮ್ಮೆ ಯೋಚಿಸಿ, ಯೋಜನೆಯನ್ನು ಮರು ಆರಂಭಿಸುವ ಕುರಿತಾಗಿ ಚಿಂತಿಸಬೇಕು ಎಂದರು.
ಬಿಇಒ ಸೋಮಶೇಖರ್ ಮಾತನಾಡಿ, ಸಮಾನತೆಯನ್ನು ಗಳಿಸಿಕೊಳ್ಳಲು ಹಾಗೂ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲು ಇಚ್ಛಾಶಕ್ತಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ರೂಢಿಸಿಕೊಳ್ಳಬೇಕು ಎಂದರು.
ಕೋವಿಡ್19ರ ಸಂಕಷ್ಟದ ಪರಿಸ್ಥಿತಿಯಲ್ಲಿ ಎಸ್’ಎಸ್’ಎಲ್’ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿತ್ತು. ಸರ್ಕಾರದ ಮಾರ್ಗಸೂಚಿಯೊಂದಿಗೆ ನಗರಸಭೆ, ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ಇದನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್. ಹಾಲೇಶಪ್ಪ ಮಾತನಾಡಿ, ಡಾ.ಅಂಬೇಡ್ಕರ್ ಅವರ ಕನಸಾಗಿದ್ದ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆ ತೋರಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಬಾಬಾ ಸಾಹೇಬ್ ಅವರಿಗೆ ತೋರುತ್ತಿರುವ ಗೌರವವಾಗಿದೆ. ಹಿಂದುಳಿದ ವಿದ್ಯಾರ್ಥಿಗಳು ಇಂದು ಅಕ್ಷರ ಕಲಿಯುತ್ತಿರುವುದರ ಹಿಂದೆ ತಮ್ಮ ಜೀವನವನ್ನೇ ತ್ಯಾಗ ಮಾಡಿ, ಸವೆಸಿದ ಹಿರಿಯನ್ನು ನಾವು ಎಂದಿಗೂ ಸ್ಮರಿಸಬೇಕು ಎಂದರು.
ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಗರಸಭೆ ಆಯುಕ್ತ ಮನೋಹರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕುಬೇಂದ್ರಪ್ಪ ಇದ್ದರು. ಪ್ರಮುಖರಾದ ಪಳನಿರಾಜ್ ನಿರೂಪಿಸಿ, ಮುರಳಿ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post