ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯವರದ್ದು ಡೋಂಗಿ ರಾಜಕಾರಣ. ಧರ್ಮಸ್ಥಳದ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ #Minister Madhu Bangarappa ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರ ಡೋಂಗಿತನವನ್ನು ಜನರು ನೋಡುತ್ತಲೇ ಇದ್ದಾರೆ. ಧರ್ಮ ಧರ್ಮ ಎಂದು ಹೇಳಿ ಧರ್ಮಸ್ಥಳದ ವಿಚಾರದಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲಿ ಎಸ್‍ಐಟಿ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮೊದಲೇ ಇವರ ಧರ್ಮಯುದ್ಧ ಪ್ರಾಂಭವಾಗಿದೆ. ಧರ್ಮಸ್ಥಳ ಎಲ್ಲಾ ಭಕ್ತರ ಕೇಂದ್ರವಾಗಿದೆ ಅದನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಮತದಾನದ ಕಳ್ಳತನದ ವಿಚಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಿರುವುದೇ ಬಿಜೆಪಿಯವರು. ಈ ಬಗ್ಗೆ ರಾಹುಲ್‍ಗಾಂಧಿಯವರು ಪ್ರಶ್ನೆ ಮಾಡಿದ್ದಾರೆ. ರಾಹುಲ್‍ಗಾಂಧಿ ತನ್ನ ತಂದೆ, ಅಜ್ಜಿಯನ್ನು ಕಳೆದುಕೊಂಡರು. ಅವರನ್ನು ಪಪ್ಪು ಎಂದು ಬಿಜೆಪಿಯವರು ಜರಿದರು. ಧರ್ಮಸ್ಥಳ ವಿಚಾರಕ್ಕೆ ಸಂಬಂಧಪಟ್ಟಂತೆ ಕಳಂಕ ಬಂದಾಗಲೇ ಎಸ್‍ಐಟಿ ರಚನೆಯಾಗಿದ್ದು, ಇದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದರು.
ಕರ್ನಾಟಕಕ್ಕೆ ಬರಬೇಕಾದ ಹಣವನ್ನು ಕೇಂದ್ರ ಸರ್ಕಾರದ ಬಳಿ ಕೇಳಲು ಇವರಿಗೆ ತಾಕತ್ತಿಲ್ಲ. ಕೇವಲ ಅಡಿಕೆಯಿಂದಲೇ ಸಾವಿರಾರು ಕೋಟಿ ಜಿಎಸ್‍ಟಿ ಸಂದಿದೆ. ಅದನ್ನು ಕೇಳಬೇಕಲ್ಲವೇ ಮೋದಿಯವರು ಚೀನಾಕ್ಕೆ ಹೋಗಿ ಕೈಕುಲುಕುತ್ತಾರೆ. ಇದನ್ನು ಹೇಳಿದರೆ ಇವರಿಗೆ ಸಿಟ್ಟು ಬರುತ್ತದೆ. ಪುಸ್ತಕಗಳನ್ನು ಕೇಸರಿಕರಣ ಮಾಡಲು ಹೋಗುತ್ತಾರೆ. ಸಿಂಧೂರ್ ಬೇಕು ಎನ್ನುತ್ತಾರೆ. ಅದು ಯಾಕೆ ಆಯಿತು ಎನ್ನುವುದನ್ನು ಹೇಳಬೇಕಲ್ಲವೇ ? ನನ್ನ ಬಗ್ಗೆ ಸಂಬಂಧ ಬಿ.ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‍ಗಳನ್ನು ಹಾಕಿ ವೈರಲ್ ಮಾಡುತ್ತಾರೆ ಇಂತಹ ರಾಜಕೀಯ ಬಿಜೆಪಿಯವರಿಗೆ ಬೇಕಾ ಎಂದು ಪ್ರಶ್ನೆ ಮಾಡಿದರು.
ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಭ್ರಷ್ಠಾಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಕಾನೂನು ಗೆಲ್ಲುತ್ತದೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು.
ಹಾಗೆಯೇ ಸೌಜನ್ಯ ಪ್ರಕರಣ ಮರು ತನಿಖೆಗೆ ಪ್ರತಿಕ್ರಿಯಿಸಿದ ಅವರು, ತನಿಖೆ ಬೇಗ ಮುಗಿದು ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಆಶಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‍ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ರಮೇಶ್ ಹೆಗ್ಗಡೆ, ಎಸ್.ಪಿ. ಶೇಷಾದ್ರಿ, ಕಲೀಂಪಾಷಾ, ರಮೇಶ್ ಶಂಕರಘಟ್ಟ, ಶರತ್ ಮರಿಯಪ್ಪ, ಆರ್. ರಾಜಶೇಖರ್, ಶ್ರೀನಿವಾಸ ಕರಿಯಣ್ಣ, ಇಕ್ಕೇರಿ ರಮೇಶ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post