ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೈಂದೂರು |
ಬೈಂದೂರು-ರಾಣೆಬೆನ್ನೂರನ್ನು Shivamogga-Byndooru ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದಕ್ಕಾಗಿ 1012.75 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರಾತಿ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಕರಾವಳಿ ಪ್ರದೇಶ ಬೈಂದೂರಿನಿಂದ ಬಯಲುಸೀಮೆಯ ರಾಣೆಬೆನ್ನೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯವನ್ನು ಕೋರಲಾಗಿತ್ತು. ಇದಕ್ಕೆ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಳೆದ ವರ್ಷ ಈ ಹೆದ್ದಾರಿಯ 7 ಕಿರು ಸೇತುವೆಗಳ ಹಾಗೂ 27.70 ಕಿಮೀ ದ್ವಿಪಥ ರಸ್ತೆ ನಿರ್ಮಾಣದ ಒಟ್ಟು 238.70 ಕೋಟಿ ರೂ.ಗಳ ಡಿಪಿಆರ್’ಗೆ ಮಂಜೂರಾತಿ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಇನ್ನು, 2022-23ನೆಯ ಸಾಲಿಗೆ ಬೈಂದೂರಿನಿಂದ ಹಾಲ್ ಕಲ್ ಜಂಕ್ಷನ್ ಮತ್ತು ಕೊಲ್ಲೂರು ಮೂಲಕ ನಾಗೋಡಿವರೆಗಿನ 40.40 ಕಿಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ, ಅಭಿವೃದ್ಧಿಗೊಳಿಸುವ 394.05 ಕೋಟಿ ಮೊತ್ತದ ಡಿಪಿಆರ್’ಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಮಂಜೂರಾತಿ ನೀಡಿದೆ. ಈ ಹೆದ್ದಾರಿಯ ಶಿಕಾರಿಪುರ ಪಟ್ಟಣಕ್ಕೆ 6.576 ಕಿಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣ ಮಾಡಲು 66.44 ಕೋಟಿ ರೂ. ಮೊತ್ತದ ಡಿಪಿಆರ್ ಹಾಗೂ ಹೊಸನಗರ ಮಾವಿನಕೊಪ್ಪ ವೃತ್ತದಿಂದ ಹೊಸನಗರ ಬೈಪಾಸ್, ಶರಾವತಿ ಹಿನ್ನೀರಿಗೆ 1.54 ಕಿಮೀ ಮತ್ತು 0.72 ಕಿಮೀ ಉದ್ದದ 2 ಭಾರೀ ಸೇತುವೆಗಳ ನಿರ್ಮಾಣದೊಂದಿಗೆ ಆಡುಗೋಡಿವರೆಗೆ 13.82 ಕಿಮೀ ಉದ್ದದ ಬದಲಿ ರಸ್ತೆ ನಿರ್ಮಾಣ ಮಾಡುವ 313.56 ಕೋಟಿ ರೂ.ಗಳ ಡಿಪಿಆರ್’ಗೆ ಮಂಜೂರಾತಿ ನೀಡಲಾಗಿದೆ ಎಂದಿದ್ದಾರೆ.
Also read: ತಿಪಟೂರಿನ ಮಹೇಶ್’ಗೆ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್’ಡಿ
ಈ ಹೆದ್ದಾರಿಯನ್ನು ಸಂಪೂರ್ಣ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಲು ಬೃಹತ್ ಮೊತ್ತದ ಅನುದಾನ ಮಂಜೂರು ಮಾಡಿದ ಸಚಿವರಿಗೆ ಸಂಸದರು ಧನ್ಯವಾದ ಸಲ್ಲಿಸಿದ್ದಾರೆ.
ಯಾವೆಲ್ಲಾ ನಗರಗಳನ್ನು ಸಂಪರ್ಕಿಸಲಿವೆ?
ಬೈಂದೂರು-ಕೊಲ್ಲೂರು-ನಗರ-ಹೊಸನಗರ-ಆನಂದಪುರ-ಶಿಕಾರಿಪುರ- ಮಾಸೂರು- ರಟ್ಟೆಹಳ್ಳಿ-ರಾಣೆಬೆನ್ನೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post