ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೀಳುತುಟಿಗೆ ಯಾವುದೇ ರೀತಿಯ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ ಹಾಗೂ ಇದನ್ನು ತಡೆಗಟ್ಟಲು ಸಾಧ್ಯವಿಲ್ಲವಾದರೂ, ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಸಲಹೆ ನೀಡಿದರು.
ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ವೈದ್ಯಕೀಯ ದತ್ತ ಸಂಸ್ಥೆಯಾದ ಮಿಷನ್ ಸ್ಮೈಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್ ಸಹಭಾಗಿತ್ವದಲ್ಲಿ ರಾಜ್ಯದ ಯುವಜನರಿಗೆ ಮತ್ತು ಮಕ್ಕಳಿಗೆ ಉಚಿತ ಸೀಳುತುಟಿ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಸೀಳುತುಟಿಗೆ ಈವರೆಗೂ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.
ಸೀಳುತುಟಿಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಗರ್ಭಧಾರಣೆಗೂ ಒಂದು ತಿಂಗಳು ಮುನ್ನ ಫೋಲಿಕ್ ಆಸಿಡ್ ಮಾತ್ರೆ ತೆಗೆದುಕೊಳ್ಳಲು ಆರಂಭಿಸಬೇಕು. ಮುಂಜಾಗ್ರತಾ ಕ್ರಮಗಳಲ್ಲಿ ಇದೂ ಒಂದು ಎಂದು ತಿಳಿಸಿದರು.
ಮುತ್ತೂಟ್ ಪಪ್ಪಚನ್ ಫೌಂಡೇಷನ್ ಸಿಎಸ್’ಆರ್ ಮುಖ್ಯಸ್ಥ ಡಾ.ಪ್ರಶಾಂತ್ ನೆಲ್ಲಿಕಲ್ ಮಾತನಾಡಿ, ಸೀಳುತುಟಿಯನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಗರ್ಭಧಾರಣೆಗೂ ಮುನ್ನ ಹಾಗೂ ಗರ್ಭ ಧರಿಸಿದ ವೇಳೆ ಮಧ್ಯಪಾನ, ಧೂಮಪಾನಗಳನ್ನು ಮಾಡಬಾರದು. ವೈದ್ಯರ ಸಲಹೆಗಳನ್ನು ಪಡೆಯದೇ ಯಾವುದೇ ರೀತಿಯ ಔಷಧಿಗಳನ್ನು ಸೇವಿಸಬಾರದು ಎಂದರು.
ಇನ್ನು, ಈ ವಿಚಾರದ ಕುರಿತಾಗಿ ಕುಟುಂಬಸ್ಥರನ್ನು ಕರೆಸಿಕೊಂಡು ವಂಶವಾಹಿಯಲ್ಲಿ ಈ ಸಮಸ್ಯೆ ಇದೆಯೇ ಎಂಬುದನ್ನು ತಿಳಿದುಕೊಂಡು, ಕೌನ್ಸಿಲಿಂಗ್ ಮಾಡುವ ವ್ಯವಸ್ಥೆಯೂ ಸಹ ಇದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಮಿಷನ್ ಸ್ಮೈಲ್ ಟೀಂ ಅನಸ್ತೇಷಿಯಾ ವಿಭಾಗದ ಮುಖ್ಯಸ್ಥರಾದ ಡಾ. ಸುಮಲತಾ ಆರ್. ಶೆಟ್ಟಿ ಮಾತನಾಡಿ, ಗರ್ಭಧಾರಣೆಗೂ ಮುನ್ನ ಎಲ್ಲ ರೀತಿಯ ಕೆಮಿಕಲ್’ಗಳಿಂದ ದೂರವಿರಬೇಕು. ಪೌಷ್ಠಿಕಾಂಶಯುಕ್ತ ಆಹಾರ, ತರಕಾರಿ, ಹಣ್ಣುಗಳನ್ನು ವೈದ್ಯರ ಸಲಹೆ ಮೇರೆಗೆ ಸೇವನೆ ಮಾಡಬೇಕು ಎಂದರು.
ಮಿಷನ್ ಸ್ಮೈಲ್ ಎಂಬುದು ನೋಂದಾಯಿತ ವೈದ್ಯಕೀಯ ಚಾರಿಟಬಲ್ ಟ್ರಸ್ಟ್ ಆಗಿದ್ದು, ಸೀಳು ತುಟಿ, ಒಡೆದ ತುಟಿ ಮತ್ತು ಇತರ ಮುಖದ ವಿರೂಪಗಳೊಂದಿಗೆ ಜನಿಸಿದ ಮಕ್ಕಳಿಗೆ ಉಚಿತ ಜೀವನವನ್ನು ಬದಲಾಯಿಸುವ ಶಸ್ತçಚಿಕಿತ್ಸೆಗಳನ್ನು ಒದಗಿಸಲು ಮೀಸಲಾಗಿದೆ. 2002 ರಿಂದ, ನಾವು 73,000ಕ್ಕೂ ಹೆಚ್ಚು ಸೀಳು ತುಟಿ ರೋಗಿಗಳಿಗೆ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನಗಳನ್ನು ಒದಗಿಸಿದ್ದೇವೆ ಎಂದರು.
ಮಿಷನ್ ಸ್ಮೈಲ್ ಟೀಂನ ಫೀಲ್ಡ್ ಮೆಡಿಕಲ್ ಡೈರೆಕ್ಟರ್ ಡಾ.ಪ್ರಭಾಕರ್ ಮಾರ್ಗಂ ಮಾತನಾಡಿ, ಕರ್ನಾಟಕದಲ್ಲಿ ಈವರೆಗೂ ಏಳು ಕಾರ್ಯಕ್ರಮ ಮಾಡಿದ್ದು, ಇದು ಎಂಟನೆಯದಾಗಿದೆ ಎಂದರು.
ಒಟ್ಟು 161 ಮಿಷನ್’ಗಳು, ಭಾರತದಾದ್ಯಂತ 22 ಔಟ್ರೀಚ್ ಕೇಂದ್ರಗಳು ಮತ್ತು ಗುವಾಹಟಿಯಲ್ಲಿ ನಮ್ಮ ಮೀಸಲಾದ ಸಮಗ್ರ ಸೀಳು ಆರೈಕೆ ಕೇಂದ್ರದ ಮೂಲಕ ಸೀಳು-ತುಟಿ ಪೀಡಿತ ವಿರೂಪಗಳಿಂದ ಬಳಲುತ್ತಿರುವ 49500 ಕ್ಕೂ ಹೆಚ್ಚು ಮಕ್ಕಳು ಮತ್ತು ವಯಸ್ಕರಿಗೆ ಶಸ್ತ್ರಚಿಕಿತ್ಸೆ ಮತ್ತು ಸೀಳು ತುಟಿ ಆರೈಕೆಯನ್ನು ಉಚಿತವಾಗಿ ಮಾಡಿದ್ದೇವೆ. ಭಾರತ ಮತ್ತು ವಿದೇಶಗಳ ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ವಯಂಸೇವಕರು ಸೀಳುವಿಕೆಯ ಕಾರಣಕ್ಕಾಗಿ ಕೈಜೋಡಿಸುತ್ತಿದ್ದಾರೆ. ಇಂತಹ 1800ಕ್ಕೂ ಹೆಚ್ಚು ಸ್ವಯಂಸೇವಕರು ಇಲ್ಲಿಯವರೆಗೆ ಈ ಉಪಕ್ರಮಕ್ಕೆ ಸೇರಿದ್ದಾರೆ ಎಂದರು.
ಇನ್ನು ಪ್ರಮುಖವಾಗಿ, ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಕಳೆದ ಎರಡು ದಿನಗಳಲ್ಲಿ 70ಕ್ಕೂ ಹೆಚ್ಚು ತಪಾಸಣೆ ಹಾಗೂ ಸೀಳುತುಟಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನೂ ಎರಡು ದಿನ ಶಿಬಿರ ನಡೆಯಲಿದ್ದು, ಅಗತ್ಯ ಇರುವವರು ಸದುಪಯೋಗ ಮಾಡಿಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯಾ ಶ್ರೀನಿವಾಸ್, ಉಪ ಪ್ರಾಂಶುಪಾಲ ಡಾ. ಮಿಥುನ್, ವೈದ್ಯಕೀಯ ಕಾಲೇಜಿನ ಡೀನ್ ಡಾ.ವಿನಾಯಕ್, ಪ್ರಾಂಶುಪಾಲ ಡಾ.ಸಿ.ಎಂ. ಸಿದ್ದಲಿಂಗಪ್ಪ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ವನಮಾಲಾ ಸತೀಶ್, ಮಿಸೈಲ್ ಸ್ಮೈಲ್ ರಾಷ್ಟ್ರೀಯ ಕಾರ್ಯಕ್ರಮದ ಮುಖ್ಯಸ್ಥ ರಫಿಯೂರ್ ರೆಹೆಮಾನ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post