ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮುದ್ರಣ ಮಾಧ್ಯಮವು ಇಂದು ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುವ ಸಂದರ್ಭ ಎದುರಾಗಿದ್ದು, ಮುದ್ರಣ ಮಾಧ್ಯಮವನ್ನೇ ನಂಬಿ ಬದುಕುತ್ತಿರುವವರು ಸಂಕಷ್ಟಗಳಿಂದ ಹೊರಬರಬೇಕಾದಲ್ಲಿ ಒಗ್ಗಟ್ಟು ಸಾಧಿಸುವ ಅನಿವಾರ್ಯತೆ ಇದೆ ಎಂದು ಹಿರಿಯ ಪತ್ರಕರ್ತ ಹಾಗೂ ಅಜೇಯ ಪತ್ರಿಕೆಯ ಸಂಪಾದಕ ಎಂ. ಶ್ರೀನಿವಾಸನ್ ಅಭಿಪ್ರಾಯ ಪಟ್ಟರು.
ಅವರು ಇಂದು ಬಿ.ಹೆಚ್.ರಸ್ತೆಯ ನೇಸರ ಸಭಾಂಗಣದಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ, ನವದೆಹಲಿಯ ಶಿವಮೊಗ್ಗ ಘಟಕದ ವತಿಯಿಂದ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ‘ಮುದ್ರಣ ಮಾಧ್ಯಮದ ಇಂದಿನ ಸ್ಥಿತಿ-ಗತಿ’ ಕುರಿತು ಮಾತನಾಡಿದರು.
ಕರ್ನಾಟಕದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದಾಗಿನಿಂದ ಹಲವಾರು ಏಳುಬೀಳುಗಳನ್ನು ಕಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು, ದೃಶ್ಯ ಮಾಧ್ಯಮಗಳ ಪೈಪೋಟಿಯಿಂದಾಗಿ ಮುದ್ರಣ ಮಾಧ್ಯಮ ಅಸ್ತಿತ್ವಕ್ಕಾಗಿ ಹೋರಾಡುವ ಪರಿಸ್ಥಿತಿ ಎದುರಾಗಿದೆ. ಇದು ಸಣ್ಣ ಪತ್ರಿಕೆಗಳ ಸಮಸ್ಯೆ ಮಾತ್ರವಲ್ಲ, ದೊಡ್ಡ ಪತ್ರಿಕೆಗಳ ಪ್ರಸಾರ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕೆಗಳ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ಇಂತಹ ಪರಿಸ್ಥಿತಿಗೆ ನಾವುಗಳೇ ಕಾರಣರಾಗಿದ್ದೇವೆ. ಅದನ್ನು ನಾವೇ ಸರಿಪಡಿಸಿಕೊಳ್ಳಬೇಕು. ಮುದ್ರಣ ಮಾಧ್ಯಮಗಳು ಬದಲಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಲ್ಫೋನ್ಸ್ ರಾಕೇಶ್ ಡಿಸೋಜಾ ಮಾತನಾಡಿ, ಕರ್ನಾಟಕದಲ್ಲಿ ಪತ್ರಿಕೆಗಳು ನಡೆದುಬಂದ ಹಾದಿಯನ್ನು ವಿವರಿಸಿದರಲ್ಲದೆ, ಸರ್ಕಾರದ ನೀತಿಗಳು ಸಹ ಮುದ್ರಣ ಮಾಧ್ಯಮದ ದುಸ್ತಿತಿಗೆ ಕಾರಣ ಎಂದರು.
ಸರ್ಕಾರವೂ ಮಾಧ್ಯಮಗಳನ್ನು ಒಡೆದು ಆಳುವ ಮೂಲಕ ದುರ್ಬಲಗೊಳಿಸುತ್ತಿದೆ. ಅದಕ್ಕೆ ಪೂರಕವಾಗಿ ಮಾಧ್ಯಮ ಸಂಘಟನೆಗಳಲ್ಲೂ ತಾರತಮ್ಯವೆಸಗಲಾಗುತ್ತದೆ. ಸರ್ಕಾರದ ಮಾನ್ಯತೆ ಪಡೆದವರು, ಮಾನ್ಯತೆ ಪಡೆಯದವರು ಎಂದು ವರ್ಗೀಕರಿಸುವ ಮೂಲಕ ಸೌಲಭ್ಯಗಳಿಂದ ಪತ್ರಕರ್ತರನ್ನು ವಂಚಿಸಲಾಗುತ್ತಿದೆ. ಸೌಲಭ್ಯಗಳಿಗಾಗಿ ಪತ್ರಕರ್ತರು ಒಗ್ಗಟ್ಟಾಗಬೇಕು. ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ಆರ್. ಷಡಾಕ್ಷರಪ್ಪ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಿದೆ. ಓದುಗರ ಕೊರತೆಯಿಲ್ಲ. ಆದರೆ, ಪತ್ರಿಕೆಗಳು ಓದುಗರನ್ನು ಸೃಷ್ಟಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇದನ್ನು ಸರಿಪಡಿಸಿಕೊಳ್ಳಬೇಕೆಂದರು.
ಪತ್ರಿಕೋದ್ಯಮ ಪದವಿ ಪಡೆದವರು ತರಾತುರಿಗೆ ಬಿದ್ದು ಸುದ್ದಿಗಳನ್ನು ಮಾಡುತ್ತಾರೆ. ಅನುಭವ ಗೌಣವಾಗುತ್ತಿದೆ. ವಿಭಿನ್ನ ಸುದ್ದಿಗಳನ್ನು ಮಾಡುವುದರ ಬದಲು, ತಾವು ಮೊದಲು ಸುದ್ದಿ ಕೊಡಬೇಕೆಂದು ಹಂಬಲಿಸುತ್ತಾರೆ. ಇದರಿಂದಾಗಿ ಎಲ್ಲ ಪತ್ರಿಕೆಗಳಲ್ಲೂ ಒಂದೇ ರೀತಿಯ ಸುದ್ದಿಗಳಿರುತ್ತವೆ. ಒಂದೇ ಸುದ್ದಿಯನ್ನು ಬೇರೆ ಬೇರೆ ಆಯಾಮಗಳಿಂದ ನೋಡಿ ಬರೆಯುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಪತ್ರಿಕಾ ದಿನಾಚರಣೆಯನ್ನು ಕೇವಲ ಜುಲೈ ತಿಂಗಳಲ್ಲಿ ಆಚರಿಸಿ ಕೈತೊಳೆದುಕೊಳ್ಳಬಾರದು. ಮುದ್ರಣ ಮಾಧ್ಯಮದ ಉಳಿವಿಗಾಗಿ ನಿರಂತರ ಪ್ರಯತ್ನ ಅಗತ್ಯ. ಒಕ್ಕೂಟ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರನ್ನು ಮುಖ್ಯವಾಗಿ ಸಂಪಾದಕರುಗಳನ್ನು ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಪತ್ರಿಕೆ ರೂಪಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಗೆ ಹೋರಾಟಗಳನ್ನು ನಡೆಸುತ್ತದೆ ಎಂದರು.
ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಕಮಲಾಕ್ಷ ಎಸ್.ಡಿ. ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಆಲ್ಫೋನ್ಸ್ ರಾಕೇಶ್ ಡಿಸೋಜಾ ಘೋಷಿಸಿದರು.
ಅಧ್ಯಕ್ಷರಾಗಿ ಜಿ.ಆರ್. ಷಡಾಕ್ಷರಪ್ಪ, ಉಪಾಧ್ಯಕ್ಷರಾಗಿ ಲಿಯೋ ಅರೋಜಾ, ಕಾರ್ಯದರ್ಶಿಯಾಗಿ ಕಮಲಾಕ್ಷ ಎಸ್.ಡಿ., ಖಜಾಂಚಿಯಾಗಿ ಶಿವರಾಜ್ ಬಿ.ಸಿ., ನಿರ್ದೇಶಕರನ್ನಾಗಿ ಜಿ. ರಾಘವೇಂದ್ರ, ರಫಿಕ್ ಕೊಪ್ಪ ಹಾಗೂ ಸತೀಶ್ ಮುಂಚೆಮನೆ ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜಸೇವಕ ಪ್ರವೀಣ್ ಜವಳಿ ಅವರನ್ನು ಸನ್ಮಾನಿಸಲಾಯಿತು. ಶಶಿಕಾಂತ್ ಜೈನ್ ಪ್ರಾರ್ಥಿಸಿದರು. ಗಣೇಶ್ ಬೀಳಗಿ ನಿರೂಪಿಸಿದರು. ಸತೀಶ್ ಮುಂಚೆಮನೆ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post