ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ವಿಳಂಬವಾಗುತ್ತಿದ್ದು, ಸಾರ್ವಜನಿಕರ ಜೀವ ಮತ್ತು ಜೀವನಕ್ಕೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿ ವೇದಿಕೆ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿತು.
ಸವಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ತುಂಬಾ ಮಂದಗತಿಯಲ್ಲಿ ಸಾಗುತ್ತಿದೆ. ಇಲ್ಲಿ ಸಾಗುವ ವಾಹನಗಳಿಗೆ ಬದಲೀ ಸೇವಾ ರಸ್ತೆ ಕಲ್ಪಿಸಿಲ್ಲ. ಇದರಿಂದ ರೈಲ್ವೆ ಗೇಟ್ ಹಾಕಿದ ಸಂದರ್ಭದಲ್ಲಿ ಗಂಟೆಗಟ್ಟಲೆ ವಾಹನದಟ್ಟಣೆ ಉಂಟಾಗುತ್ತದೆ. ಕಾಮಗಾರಿಗಾಗಿ ದೊಡ್ಡದೊಡ್ಡ ಗುಂಡಿಗಳನ್ನು ತೆಗೆಯಲಾಗಿದೆ. ಅಲ್ಲಿಯೇ ದ್ವಿಚಕ್ರವಾಹನಗಳು ಒಡಾಡುವುದರಿಂದ ತೊಂದರೆಯಾಗುತ್ತಿದೆ. ಎಚ್ಚರಿಕೆಯ ಸೂಚನಾ ಫಲಕಗಳನ್ನು ಕೂಡ ಅಳವಡಿಸಿಲ್ಲ. ಎಂದು ದೂರಿದರು.
ರೈಲ್ವೆ ಗೇಟ್ ಹಾಕಿದಾಗ ಅಕಸ್ಮಾತ್ ಆಂಬುಲೆನ್ಸ್‌ಗಳು ಬಂದರೆ ಯಾವುದೇ ಕಾರಣಕ್ಕೂ ರೈಲ್ವೆ ಗೇಟ್ ತೆರೆದಾಗ ತುರ್ತಾಗಿ ಸಾಗಲು ಸಾಧ್ಯವಿಲ್ಲ. ಈ ಹಿಂದೆ ಇಲ್ಲಿ ರೋಗಿಯೊಬ್ಬರನ್ನು ಅಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗದೆ ರೋಗಿ ಸಾವು ಕಂಡರು. ಈ ಅವ್ಯಸ್ಥೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
Also read: ವಿಐಎಸ್‌ಎಲ್ ಉಳಿವಿಗಾಗಿ ಸಹಕರಿಸಿ: ಪೇಜಾವರ ಶ್ರೀಗಳಿಗೆ ಮನವಿ
ಕಾಮಗಾರಿಗಳ ವಿಳಂಬಕ್ಕೆ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯೇ ಕಾರಣವಾಗಿದೆ. ಜಿಲ್ಲಾಡಳಿತ ಸುಮ್ಮನಿದೆ. ಜನರು ಸಮಸ್ಯೆ ಕೇಳಿದರೆ ಬೇರೆಬೇರೆ ಇಲಾಖೆಯ ಕಡೆ ಬೊಟ್ಟು ತೋರಿಸುತ್ತಾರೆ. ಸಂಚಾರಿ ಪೊಲೀಸರು ವಿಫಲರಾಗಿದ್ದಾರೆ. ತಕ್ಷಣವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರ ವೇದಿಕೆಯ ಅಧ್ಯಕ್ಷ ಸ್ಮಿನ್ನು, ಪ್ರಮುಖರಾದ ಹರ್ಷಿತ್, ಪವನ್, ಶರತ್, ದರ್ಶನ್, ಅರುಣ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post