ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಜನರ ದೈನಂದಿನ ಬಳಕೆಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಮದ್ಯದ ಬೆಲೆಯನ್ನು ಇಳಿಕೆ ಮಾಡಬೇಕು. ಕೃಷಿಗೆ ಸಂಬಂಧಪಟ್ಟ ವಸ್ತುಗಳಾದ ಪಿಯುಸಿ ಪೈಪ್‌ಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಇಳಿಸಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಆಗ್ರಹಿಸಿದೆ.
ದೇಶವೇ ಕೊರೋನಾ ಹಾವಳಿಗೆ ತತ್ತರಿಸಿ ಜನತೆ ಇದೀಗ ಬದುಕು ಕಟ್ಟಿಕೊಳ್ಳಲು ಹವಣಿಸುತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿ ಬಡ ಜನತೆಗೆ ಗಾಯದ ಮೇಲೆ ಬರೆ ಎಳೆದಿದೆ. ದಿನನಿತ್ಯ ಬಳಕೆಯ ವಸ್ತುಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಏರಿಕೆಯಾಗಿರುವುದು ಜನತೆಗೆ ಹೊರೆಯಾಗಿದೆ. ಈಗಾಗಲೇ ಬೆಳೆನಷ್ಟ ಮತ್ತಿತರ ಸಮಸ್ಯೆಗಳ ಸುಳಿಯಲ್ಲಿರುವ ರೈತರ ಕೃಷಿ ಚಟುವಟಿಕೆಗೆ ಅಗತ್ಯವಿರುವ ಪೈಪ್‌ಗಳ ಬೆಲೆ ಏರಿಕೆಯನ್ನು ಸಮಿತಿ ಖಂಡಿಸಿದೆ.
ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಜನತೆಗೆ ಕೇಂದ್ರ ಸರ್ಕಾರ ಸಂಕಷ್ಟವನ್ನು ಕಡಿಮೆ ಮಾಡುವ ಬದಲು ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನಗಳ ಮೇಲೆ ಶೇ.೩೦ರಷ್ಟು ತೆರಿಗೆ ವಿಧಿಸಿರುವುದು ಖಂಡನೀಯವಾಗಿದ್ದು, ಅಡುಗೆ ಅನಿಲದ ಬೆಲೆಯನ್ನು ಸಹ ಇಳಿಕೆ ಮಾಡಬೇಕು ಎಂದು ಸಮಿತಿ ಮನವಿ ಮಾಡಿದೆ.
ಮದ್ಯ ಮೇಲಿನ ಸುಂಕ ಇಳಿಸಿ
ರಾಜ್ಯ ಸರ್ಕಾರ ಸಾರಾಯಿ ನಿಷೇಧ ಮಾಡಿದ ಮೇಲೆ ಮದ್ಯಪ್ರಿಯರು ಮದ್ಯ ಸೇವನೆಯನ್ನೇನು ನಿಲ್ಲಿಸಿಲ್ಲ. 12ರೂ. ಕೊಟ್ಟು ಸಾರಾಯಿ ಕುಡಿಯುತ್ತಿದ್ದವರು ಇದೀಗ ಸುಮಾರು 80ರೂನಿಂದ 150ರೂ. ವರೆಗಿನ ವಿಸ್ಕಿ, ಬ್ರ್ಯಾಂಡಿ ರಮ್ ಕುಡಿಯುತ್ತಿದ್ದಾರೆ. ಇದರಿಂದ ದಿನವಿಡೀ ದುಡಿದು ಆಯಾಸಗೊಂಡ ಮದ್ಯಪ್ರಿಯರಿಗೆ ದೊಡ್ಡ ಹೊರೆಯಾಗಿದೆ. ಇದೀಗ ಮತ್ತೆ ಸರ್ಕಾರಗಳು ಮದ್ಯದ ಮೇಲಿನ ಸುಂಕವನ್ನು ಹೆಚ್ಚಿಸಿದೆ. ಪ್ರತಿ ಭಾರಿ ಬಜೆಟ್ ಘೋಷಣೆಯಾದಾಗಲೂ ಮದ್ಯವನ್ನೇ ಟಾರ್ಗೆಟ್ ಮಾಡಿ ಸುಂಕ ವಿಧಿಸಲಾಗುತ್ತಿದೆ. ಕೂಡಲೇ ಮದ್ಯದ ಮೇಲಿನ ಸುಂಕವನ್ನು ಇಳಿಸಬೇಕು ಎಂದು ಸಮಿತಿ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post