ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಶೇ.85ರಷ್ಟು ಲೂಟಿ ಮಾಡಿದ್ದೂ ಅಲ್ಲದೆ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದರು.
ರಾಜೀವ್‍ಗಾಂಧಿ ಯೋಜನೆಯ ವಸತಿ ಮನೆಗಳ ಹಗರಣ ಹಾಗೂ ಮುಸಲ್ಮಾನರಿಗೆ ಮಿತಿಮೀರಿದ ಮೀಸಲಾತಿ ಕೊಡುತ್ತಿರುವ ರಾಜ್ಯ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಜಿಲ್ಲಾ ಪಂಚಾಯತ್ ಕಛೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ಬಿಜೆಪಿ ಸರ್ಕಾರವಿದ್ದಾಗ ಭಾಗ್ಯಲಕ್ಷ್ಮೀ ಬಾಂಡ್, ಸೈಕಲ್ ಕೊಟ್ಟಿದ್ದೆವು. ಅದನ್ನು ಬರೀ ಹಿಂದೂಗಳಿಗೆ ಮಾತ್ರ ಕೊಟ್ಟಿಲ್ಲ. ಎಲ್ಲಾ ಜಾತಿಯವರಿಗೂ ನೀಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರ ಬಿಜೆಪಿಯದ್ದಾಗಿದ್ದು, ಕೂಲಿ ಕಾರ್ಮಿಕರ, ರೈತರ ಹಾಗೂ ಬಡವರ ಪಕ್ಷ ಬಿಜೆಪಿ ಎಂದರು.

ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಪ್ರಶ್ನಿಸಬೇಕಾಗುತ್ತದೆ. ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ಕಾಪಾಡಲಾಗುತ್ತಿದೆ ಎಂದು ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ ಸರಿಯಾಗಿ ತನಿಖೆ ನಡೆಯದೇ ಇನ್ನೂ ನ್ಯಾಯ ಸಿಕ್ಕಿಲ್ಲ. ಅವರ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ್ದರೂ ಇದೂವರೆಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರಕ್ಕೆ ನೈತಿಕತೆ ಇದೆ ಎನ್ನುವುದಾದರೆ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಿ, ಚುನಾವಣೆ ಎದುರಿಸಬೇಕು ಎಂದು ತಾಕೀತು ಮಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಮಾಜಿ ಶಾಸಕರಾದ ಕೆ.ಬಿ. ಅಶೋಕ್‍ನಾಯ್ಕ, ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಮೋಹನ್‍ರೆಡ್ಡಿ, ಪ್ರಮುಖರಾದ ಎಸ್. ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ರಮೇಶ್, ನಾಗರಾಜ್, ಶಂಕರ್‍ಗನ್ನಿ, ಸುರೇಖಾ ಮುರಳೀಧರ್, ಹರಿಕೃಷ್ಣ, ಶಿವಕುಮಾರ್, ಪ್ರಭು, ರಾಹುಲ್‍ಬಿದಿರೆ ಇನ್ನಿತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post