ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಳೆಯಿಂದ ತೀವ್ರ ತರಹದ ಹಾನಿಗೊಳಗಾಗಿ ರಸ್ತೆ ಸಂಪರ್ಕ ಕಳೆದುಕೊಂಡಿರುವ ಮಲೆನಾಡಿನ ಗ್ರಾಮೀಣ ಪ್ರದೇಶಗಳಿಗೆ ವ್ಯವಸ್ಥಿತ ಹಾಗೂ ಶಾಶ್ವತ ಸಂಪರ್ಕ ಕಲ್ಪಿಸಲು ಕಿರುಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಶಾಸಕ ಹರತಾಳು ಹಾಲಪ್ಪ ಅವರೊಂದಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಇರುವಕ್ಕಿ, ಕೆದಲೂರು, ಬ್ಯಾಡರಕೊಪ್ಪ, ತ್ಯಾಗರ್ತಿ ಹಾಗೂ ಸೊರಬ ತಾಲೂಕಿನ ಉದ್ರಿ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾಗಿರುವ ಗ್ರಾಮೀಣ ರಸ್ತೆ, ಸೇತುವೆ, ಜಮೀನು, ಭೂಕುಸಿತ, ಬಿದ್ದಿರುವ ಮನೆಗಳನ್ನು ಪರಿಶೀಲಿಸಿ ಮಾತನಾಡುತ್ತಿದ್ದರು.
ಕಳೆದ ಸಾಲಿನಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 69 ಕಿರುಸೇತುವೆಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಸಂಪರ್ಕ ಕಳೆದುಕೊಂಡಿರುವ ಸೊರಬ ಸಾಗರ ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಗ್ರಾಮಗಳಿಗೆ ಹೆಚ್ಚೆಚ್ಚು ಕಿರುಸೇತುವೆಗಳನ್ನು ನಿರ್ಮಿಸಿಕೊಡಲಾಗುವುದು ಎಂದ ಅವರು ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ಶೀಘ್ರದಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಹೊಸ ಮಂತ್ರಿಮಂಡಲ ರಚನೆಯಾಗಿದ್ದು ಮಾನ್ಯ ಮುಖ್ಯಮಂತ್ರಿಗಳು ಆಯಾ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಮಾದರಿ ರಾಜ್ಯ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.
ವಿಶೇಷವಾಗಿ ಜಿಲ್ಲೆಯ ಇಬ್ಬರು ಶಾಸಕರಿಗೆ ಪ್ರಮುಖವಾದ ಎರಡು ಖಾತೆಗಳನ್ನು ನೀಡಿರುವುದು ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ. ಪ್ರಸ್ತುತ ತಾವು ನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಕೇಂದ್ರ ಪುರಸ್ಕøತ ನರೇಗಾ, ಸ್ವಚ್ಚ ಭಾರತ್, ಮನೆಮನೆಗೆ ಗಂಗೆ ಹಾಗೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಈ ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದರು.
ಮಲೆನಾಡಿನಲ್ಲಿ ಪದೆಪದೆ ಅಡಿಕೆ ಬೆಳೆ ಕೊಳೆರೋಗಕ್ಕೆ ಒಳಗಾಗುತ್ತಿದೆ. ಅದರ ನಿಯಂತ್ರಣಕ್ಕಾಗಿ ಸಂಶೋಧನೆಗಳು ನಡೆಯುತ್ತಿವೆ. ಅದಕ್ಕಾಗಿ ಟಾಸ್ಕ್ ಫೆÇೀರ್ಸ್‍ನ್ನು ರಚಿಸಲಾಗಿದ್ದು, ಶೀಘ್ರದಲ್ಲಿ ಸಂಶೋಧನೆಯ ಫಲ ಲಭಿಸಲಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಹರತಾಳು ಹಾಲಪ್ಪ ಅವರು ಮಾತನಾಡಿ, ಮಾನ್ಯ ಸಚಿವರೊಂದಿಗೆ ಮಳೆಯಿಂದ ಧರೆಕುಸಿತ, ಮನೆ, ಸೇತುವೆ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ನಾಗರಾಜ್ ಸಿಂಗ್ರೇರ್ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post