ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ವೃತ್ತಿಪರ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು ಜೀವನೋಪಾಯಕ್ಕಾಗಿ ತಮ್ಮ ಸ್ಟುಡಿಯೋ ತೆರೆದು ದೈನಂದಿನ ಕೆಲಸ ನಿರ್ವಹಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಇಂದು ಜಿಲ್ಲಾ ಛಾಯಾಗ್ರಾಹಕರ ಸಂಘದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾ;ಗಿ ರಾಜ್ಯ ಸರ್ಕಾರ ಏ.28ರಿಂದ 14 ದಿನಗಳ ಜನತಾ ಕಫ್ರ್ಯೂ ಜಾರಿಗೊಳಿಸಿದೆ, ಆದರೆ, ವೃತ್ತಿಪರ ಛಾಯಾಗ್ರಾಹಕರು ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವುದರಿಂದ ತಮ್ಮ ಸ್ಟುಡಿಯೋಗಳನ್ನು ತೆರೆದು ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಂಘಟನೆಯು ಜಿಲ್ಲೆಯಲ್ಲಿ 25 ವರ್ಷಗಳಿಂದ ಶ್ರಮಿಸುತ್ತಿದ್ದು, 3 ಸಾವಿರಕ್ಕೂ ಹೆಚ್ಚು ವೃತ್ತಿಪರ ಛಾಯಾಗ್ರಾಹಕರಿದ್ದು, 350ಕ್ಕೂ ಹೆಚ್ಚು ಸ್ಟುಡಿಯೋಗಳಿವೆ. ಕೆಲವರು ಪತ್ರಿಕಾ ಮಾಧ್ಯಮಗಳಲ್ಲಿ, ಮದುವೆ ಸಮಾರಂಭ ಹಾಗೂ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವರ್ಷದಲ್ಲಿ 6 ತಿಂಗಳು ಮಾತ್ರ ಮದುವೆ, ಇನ್ನಿತರೆ ಶುಭ ಸಮಾರಂಭ ನಡೆಯುತ್ತವೆ. ಉಳಿದ ದಿನಗಳಲ್ಲಿ ಛಾಯಾಗ್ರಾಹಕರು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಕೊರೋನಾದಿಂದಾಗಿ ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರು ತೊಂದರೆ ಅನುಭವಿಸಿದ್ದಾರೆ. ಇದರ ಸಲುವಾಗಿ ಸಂಘ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ಆರ್ಥಿಕ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ಆರ್ಥಿಕ ನೆರವು ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ಕೊರೋನಾ ಎರಡನೇ ಅಲೆ ಪ್ರಾರಂಭಗೊಂಡಿದ್ದು, ಸರ್ಕಾರ ಜನತಾ ಕರ್ಫ್ಯು ಜಾರಿಗೊಳಿಸಿರುವುದರಿಂದ ಛಾಯಾಗ್ರಾಹಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸ್ಟುಡಿಯೋಗಳನ್ನು ತೆರೆದು ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಛಾಯಾಗ್ರಾಹಕರ ಕುಟುಂಬ ನಿರ್ವಹಣೆಗೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಧರ್, ಯೋಗರಾಜ್, ಕೆ.ಆರ್. ಸೋಮನಾಥ್, ಶಿವಮೊಗ್ಗ ನಾಗರಾಜ್, ನಂದನ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post