ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ #Shivamogga-Bhadravati Urban Development Authority ನಡೆದಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದಾಗಿ ಸಾರ್ವಜನಿಕ ಸಂಪನ್ಮೂಲ ಲೂಟಿಯಾಗಿರುವ ಕುರಿತು ಸೂಕ್ತ ಹಾಗೂ ನಿಸ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಜಿಲ್ಲಾ ನಗರ ಜನತಾದಳದಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
20-05-2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪ್ರಸ್ತಕ ದಿನಗಳವರೆಗಿನ ಪ್ರಾಧಿಕಾರದ ಕಾಮಗಾರಿಗಳ ಕುರಿತು ಕೂಡಲೇ ತನಿಖೆ ನಡೆಸಬೇಕು. ಶಿವಮೊಗ್ಗ ನಿವೇಶನ ಆಕಾಂಕ್ಷಿಗಳ ನಿವೇಶನ ಪಡೆಯುವ ಕನಸು ನನಸು ಮಾಡಲು ಅವಳಿ ನಗರಗಳ ಅಭಿವೃದ್ದಿಗಾಗಿ ಕೆಲಸ ಮಾಡಬೇಕಾದ ಪ್ರಾಧಿಕಾರವು ಕಳಪೆ ಕಾಮಗಾರಿ, ಸುಳ್ಳು ಬಿಲ್ಲುಗಳು, ಅವೈಜ್ಞಾನಿಕ ಕೆಲಸಗಳ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿದೆ. ಈಗಾಗಲೇ ಪ್ರಾಧಿಕಾರದ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತರಿಗೆ ಈ ಬಗ್ಗೆ ಇಬ್ಬರು ಗುತ್ತಿಗೆದಾರರು ದೂರು ಸಲ್ಲಿಸಿದ್ದರೂ ಯಾವುದೇ ಸೂಕ್ತ ತನಿಖೆ ನಡೆದಿಲ್ಲ. ಹಿಂದೆ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ಸಂದರ್ಭದಲ್ಲಿ ಅಕ್ರಮಗಳು ನಡೆದಿದ್ದು, ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ರವರು ನಿವೇಶನ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ವರದಿ ನೀಡಿದ್ದು, ಲೋಕಾಯುಕ್ತದ ತನಿಖೆಯು ನಡೆದಿತ್ತು. ಇದರಿಂದ ಅರ್ಹ ಅರ್ಜಿದಾರರಿಗೆ ನಿವೇಶನ ಪಡೆದುಕೊಳ್ಳಲು ಇದ್ದ ತೊಂದರೆಯೂ ನಿವಾರಣೆಯಾಗಿತ್ತು.
ಊರುಗಡೂರು ಬಡಾವಣೆ ಸೇರಿದಂತೆ ಪ್ರಾಧಿಕಾರ ನಿರ್ಮಿಸುತ್ತಿರುವ ಬಡಾವಣೆಗಳ ಕಾಮಗಾರಿಯಲ್ಲೂ ಅಕ್ರಮ ನಡೆದಿದ್ದು, ನಿವೇಶನ ಆಕಾಂಕ್ಷಿಗಳಿಗೆ ತೀವ್ರ ತೊಂದರೆಯಾಗಿದೆ. ಮತ್ತು ಬಡಾವಣೆಗಳ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರ ನಿವೇಶನದ ಜಾಗದಿಂದಲೇ ಮಣ್ಣು ತೆಗೆದು ಬಳಸಿ, ಆ ನಿವೇಶನದ ಗುಂಡಿಗಳಿಗೆ ನಗರದ ಕಸ ತುಂಬುವ ಆಘಾತಕಾರಿ ಕೆಲಸವೂ ಕೂಡ ಬೆಳಕಿಗೆ ಬಂದಿದೆ. ಮತ್ತು ನೂತನ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಬಾಕ್ಸ್ ಚರಂಡಿ ಮತ್ತು ಮೋರಿಗಳು, ಪಾರ್ಕ್ ನಿರ್ಮಾಣದ ಟೆಂಡರ್ ಪ್ರಕ್ರಿಯೆಯಲ್ಲೂ ಕೂಡ ಭ್ರಷ್ಟಾಚಾರ ನಡೆದಿದೆ. ಈ ಎಲ್ಲಾ ಅವ್ಯವಹಾರಗಳ ವಿರುದ್ಧ ಗುತ್ತಿಗೆದಾರರಾದ ಗುರುಸಾಯಿ ಹಾಗೂ ಬಸವರಾಜ್ರವರು ಈಗಾಗಲೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ಜೊತೆಗೆ ಸಾಕ್ಷಾಧಾರಗಳಿಂದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಕಾಂಗ್ರೆಸ್ ಅವಧಿಯಲ್ಲಿ ನಡೆದ 91ಕ್ಕೂ ಹೆಚ್ಚು ಕಾಮಗಾರಿಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು. ಈಗ ಬೆಳಕಿಗೆ ಬಂದ 13 ಕಾಮಗಾರಿಗಳನ್ನು ಒಳಗೊಂಡಂತೆ ಈವರೆಗೆ ನಡೆಸಿದ ಎಲ್ಲಾ ಕಾಮಗಾರಿಗಳ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಕೊಡಿಸಿ, ದುರುಪಯೋಗವಾದ ಹಣವನ್ನು ತಪ್ಪಿತಸ್ಥರಿಂದ ಪ್ರಾಧಿಕಾರಕ್ಕೆ ಮರುಪಾವತಿಸುವ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಹಾಗೂ ಇದಕ್ಕೆ ಕಾರಣಕರ್ತರಾದ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಶಿವಮೊಗ್ಗ ನಗರ ಜೆಡಿಎಸ್ ಆಗ್ರಹಿಸಿದೆ.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಈಗಿನ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ರವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾಮಗಾರಿಗಳು ನನ್ನ ಕಾಲದಲ್ಲಿ ಆಗಿದ್ದಲ್ಲ, ತನಿಖೆ ನಡೆಯುವುದಕ್ಕೆ ನನ್ನ ಅಭ್ಯಂತರವಿಲ್ಲ ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ ಎಂದು ಹೇಳಿದ್ದರು. ಈಗ ಬೆಳಕಿಗೆ ಬಂದ 13 ಕಾಮಗಾರಿಯಲ್ಲಿ 12 ಕಾಮಗಾರಿ ಅವರು ಅಧ್ಯಕ್ಷರಾಗಿದ್ದಾಗಲೇ ನಡೆದಿತ್ತು ಎನ್ನುವುದಕ್ಕೆ ದಾಖಲೆ ಇದೆ. ಅಧ್ಯಕ್ಷರೂ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ಈ ಹಗರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಈಗಾಗಲೇ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಕೂಡಲೇ ತನಿಖೆ ನಡೆಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್ಸಿಂಗ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಪ್ರಮುಖರಾದ ನರಸಿಂಹ ಗಂಧದಮನೆ, ಭವಾನಿ ನರಸಿಂಹ, ಗೀತಾಸತೀಶ್, ಸಂಜಯ್ ಕಶ್ಯಪ್, ರಘು ಬಾಲರಾಜ್, ಶಾರದಮ್ಮ, ರವಿ ಕೋಳಿಗದ್ದೆ, ಚಂದ್ರಮತಿ ಹೆಗಡೆ, ಗೋವಿಂದ್ರಾಜ್, ತ್ಯಾಗ್ರಾಜ್, ಲೋಹಿತ್, ಪ್ರಫುಲ್ಲ, ಲೋಕೇಶ್, ಹೆಚ್.ಎನ್. ಮಹೇಶ್, ಅರುಣ್ ಜಿ.ರಾವ್, ಮೋಹನ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















