ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶೈಕ್ಷಣಿಕ ವಿದ್ಯಾಸಂಸ್ಥೆ ಮತ್ತು ಉದ್ಯಮದ ನಡುವಿನ ಸಹಯೋಗದಿಂದ ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಕಲಿಕೆಗೆ ಸಾಧ್ಯವಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ #JNNCE ವತಿಯಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಎಲ್ ಅಂಡ್ ಟಿ ಕಂಪನಿಯೊಂದಿಗೆ ಒಡಂಬಡಿಕೆ ಸಹಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡಿ ಪರಿಪೂರ್ಣ ಕಲಿಕೆಯೊಂದಿಗೆ ಪದವೀಧರರಾಗಿ ಸಮಾಜಕ್ಕೆ ತೆರೆದುಕೊಳ್ಳಲು ಇಂತಹ ಒಡಂಬಡಿಕೆಗಳು ಅತ್ಯವಶ್ಯಕ. ಇದು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗಾಗಿ ವಿದ್ಯಾರ್ಥಿಗಳನ್ನು ಸಬಲಗೊಳಿಸುತ್ತದೆ.
ಎಲ್ ಅಂಡ್ ಟಿ ಅಂತಹ ಪ್ರತಿಷ್ಠಿತ ಕಂಪನಿ ನಮ್ಮ ಕಾಲೇಜಿನ ಜೊತೆಗೆ ಒಡಂಬಡಿಕೆ ಮಾಡಿರುವುದು ಮತ್ತು ಇ-ಮೊಬಿಲಿಟಿ ಎಲೆಕ್ಟ್ರಿಕ್ ವಾಹನಗಳ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ಸ್ಥಾಪನೆ ಮಾಡಲು ಯೋಜಿಸಿರುವುದು ಸಂತೋಷದ ವಿಷಯವಾಗಿದೆ. ಸಿವಿಲ್ ಮತ್ತು ಮೆಕ್ಯಾನಿಕಲ್ ವಿಷಯಗಳು ಇಂಜಿನಿಯರಿಂಗ್ ಕ್ಷೇತ್ರದ ಮೂಲ ಬೇರಾಗಿದ್ದು, ಹೊಸತನದ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮತ್ತೊಮ್ಮೆ ಬೇಡಿಕೆಯ ವಿಭಾಗವಾಗಿ ಮುನ್ನಲೆಗೆ ಬಂದಿದೆ.
ಉದ್ಯಮಗಳೊಂದಿಗೆ ಸಂಬಂಧ ವಿದ್ಯಾಸಂಸ್ಥೆಗಳಲ್ಲಿ ಪ್ರೌಢಿಮೆಯ ವಾತಾವರಣ ನಿರ್ಮಾಣ ಮಾಡಲಿದ್ದು, ಅಂತಹ ಪೂರಕ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಇಂದು ಎಲೆಕ್ಟ್ರಿಕ್ ವಾಹನಗಳು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುತ್ತಿದೆ. ಮತ್ತಷ್ಟು ಸಂಶೋಧನೆಗಳೊಂದಿಗೆ ಪರಿಸರಕ್ಕೆ ಉತ್ತಮವಾಗುವಂತಹ ನಾವೀನ್ಯ ಯೋಜನೆಗಳು ಅನುಷ್ಟಾನಗೊಳ್ಳಲಿ ಎಂದು ಆಶಿಸಿದರು.
Also read: ನಿಯಂತ್ರಣ ತಪ್ಪಿದ ಬೈಕ್ | ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ
ಎಲ್ ಅಂಡ್ ಟಿ ಕಂಪನಿಯ ಎಜುಟೆಕ್ ವಿಭಾಗದ ಮುಖ್ಯಸ್ಥೆ ಫೆಬಿನ್.ಎಂ.ಎಫ್ ಮಾತನಾಡಿ, ಶೈಕ್ಷಣಿಕ ಮತ್ತು ಉದ್ಯಮದೊಂದಿಗೆ ನಿಜವಾದ ಒಡಂಬಡಿಕೆ ಪ್ರಾರಂಭವಾಗುವುದೆ ಅಲ್ಲೊಂದು ಹೊಸ ನಾವೀನ್ಯ ಪ್ರಯೋಗ ನಡೆದಾಗ. ಉಪನ್ಯಾಸಕ ವರ್ಗ ತಮ್ಮ ವಿದ್ಯಾರ್ಥಿ ಸಮೂಹದಿಂದ ಅಂತಹ ನಾವೀನ್ಯ ಪ್ರಯೋಗಗಳಿಗೆ ಪೂರಕವಾಗುವಂತಹ ವಾತಾವರಣ ನಿರ್ಮಾಣ ಮಾಡಲು ನಿಸ್ವಾರ್ಥ ಪ್ರಯತ್ನ ನಡೆಸುತ್ತಿರುತ್ತಾರೆ.
ಎಲ್ ಅಂಡ್ ಟಿ ಕಂಪನಿ ಪ್ರತಿ ವರ್ಷ ಇಪ್ಪತ್ತು ಸಾವಿರಕ್ಕು ಹೆಚ್ಚು ಹೊಸ ನೌಕರ ವೃಂದವನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಕಂಪನಿಗೆ ಕೌಶಲ್ಯ ಗುಣಗಳ ಬುದ್ದಿವಂತ ನಾಯಕರು ಬೇಕಾಗಿದ್ದಾರೆ. ಅಂತಹ ಕೌಶಲ್ಯತೆಗಳು ಕೇವಲ ಶೈಕ್ಷಣಿಕ ಅಧ್ಯಯನದಿಂದ ಮಾತ್ರ ಸಿಗುವುದಿಲ್ಲ ಎಂದು ಅರಿತ ಕಂಪನಿಯು, ಇಂತಹ ಒಡಂಬಡಿಕೆ ಹಾಗೂ ಇಂಟರ್ನ್ ಶಿಪ್ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಅಗತ್ಯ ಕಾರ್ಯಕ್ಷಮತೆ ವೃದ್ಧಿಸುವಂತೆ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಲ್ ಅಂಡ್ ಟಿ ಕಂಪನಿಯ ಎಜುಟೆಕ್ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಮಾಯಾಂಕ್ ರಂಜನ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಈ.ಬಸವರಾಜ್, ರೊಬೊಟಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಬಸಪ್ಪಾಜಿ, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಹೆಚ್.ಬಿ.ಸುರೇಶ್, ಸಂಯೋಜಕ ಅಮಿತ್ ಕುಮಾರ್.ಎಸ್.ಜೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post