ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದು ಪ್ರಕರಣವನ್ನು ವಿಭಿನ್ನವಾಗಿ ಎಲ್ಲಾ ಆಯಮಗಳಲ್ಲಿ ಆಲೋಚಿಸುವಂತಹ ಪ್ರತಿಫಲಿತ ಚಿಂತನೆಗಳನ್ನು ವಕೀಲಿ ವೃತ್ತಿಯಲ್ಲಿ #Lawyer Profession ಬೆಳೆಸಿಕೊಳ್ಳಿ ಎಂದು ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಇ.ಎಸ್.ಇಂದರೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದ ವತಿಯಿಂದ ಸೋಮವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಡೇ #Graduation Day ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಪದವಿ #Law Degree ಪಡೆದ ನಂತರವೇ ನಿಜವಾದ ವಕೀಲ ವಿದ್ಯಾರ್ಥಿ ಜೀವನ ಪ್ರಾರಂಭವಾಗುವುದು. ಬರವಣಿಗೆ, ನಿರೂಪಣೆ ಶಬ್ದಕೋಶಗಳ ಬಳಕೆ, ವ್ಯಾಖ್ಯಾನದಂತಹ ಕೌಶಲ್ಯತೆಗಳೇ ವಕೀಲಿ ವೃತ್ತಿಯ ಬಹು ದೊಡ್ಡ ಅವಶ್ಯಕತೆಯಾಗಿದೆ. ಕೋರ್ಟ್ ನಲ್ಲಿ ಹೆಚ್ಚು ಸಮಯ ಕಳೆಯಿರಿ. ವಿವಿಧ ಕಾಯ್ದೆಗಳ ಬಗ್ಗೆ, ಪ್ರಕರಣಗಳ ಕುರಿತು ಹಿರಿಯ ವಕೀಲರ ಜೊತೆಗೆ ಚರ್ಚಿಸುತ್ತ ವಾಸ್ತವತೆಯ ಜ್ಞಾನ ಪಡೆಯಿರಿ. ಜೀವನ ಅನುಭವಗಳು ನಿಜವಾದ ಉತ್ಕೃಷ್ಟ ಜ್ಞಾನ ನೀಡುತ್ತದೆ.
Also read: ಉದ್ದಟತನದಿಂದ ಸೃಜಶೀಲ ಸಾಹಿತ್ಯ ಹಾದಿತಪ್ಪುತ್ತದೆ
ನ್ಯಾಯಾಲಯದ ತೀರ್ಪುಗಳನ್ನು ಪರಿಪೂರ್ಣವಾಗಿ ಅಧ್ಯಯನ ನಡೆಸಿ. ನಮ್ಮ ಆಲೋಚನೆಯೆ ನಿಜವಾದ ಎಐ. ತಂತ್ರಜ್ಞಾನಗಳು ನಮಗೆ ಹೊಸ ಕಲಿಕೆಗೆ ಅವಕಾಶ ಮಾಡಿಕೊಡಬಹುದೆ ವಿನಃ, ಅನುಷ್ಟಾನಗೊಳಿಸುವ ಕಲೆ ನಮ್ಮ ಸಾಮಾನ್ಯ ಜ್ಞಾನದ ಮೇಲೆಯೆ ಅವಲಂಬಿತವಾಗಿರುತ್ತದೆ.
ವಕೀಲ ವೃತ್ತಿ ನಿಜವಾದ ಆನಂದದಾಯಕ ಬದುಕನ್ನು ಹೊಂದಿದೆ. ನೊಂದವರ ದನಿಯಾಗಿ ನ್ಯಾಯ ಒದಗಿಸಿದ ಸಾರ್ಥಕತೆಯ ನಿದ್ದೆ ವಕೀಲಿ ವೃತ್ತಿಯಲ್ಲಿ ಮಾತ್ರ ಪಡೆಯಬಹುದು. ವಕೀಲರು ಧರಿಸುವ ಕಪ್ಪು ಕೋಟ್, ನೊಂದವರ ನೋವುಗಳನ್ನು ನಾವು ಹೊರುತ್ತೇವೆ ಎಂಬ ಅರ್ಥವನ್ನು ಸಂಕೇತಿಸುತ್ತದೆ. ವೃತ್ತಿಯಲ್ಲಿ ಮೊದಲ ಹತ್ತು ವರ್ಷ ಯಾವುದೇ ಸೀಮಿತತೆಯಿಲ್ಲದೆ ಕತ್ತೆಯಂತೆ ಕೆಲಸ ಮಾಡಿ, ಹನ್ನೊಂದನೇ ವರ್ಷ ನೀವೆ ಸ್ಪರ್ಧಾತ್ಮಕ ಯುಗದ ಕುದುರೆಯಾಗಿ ರೂಪಗೊಂಡಿರುತ್ತಿರಿ. ಗ್ರೌಂಡ್ ಸ್ಯೂಟ್ ಪೆಟಿಷನ್ ಗಳನ್ನು ಬರೆಯುವಾಗ ನೇರವಾಗಿ ಪ್ರಕರಣದ ಮುಖ್ಯ ವಿಚಾರಗಳ ಬಗ್ಗೆ ಬರೆಯುತ್ತಾ ಹೋಗಿ. ಅದು ನ್ಯಾಯಾಲಯದ ತೀರ್ಪುಗಳ ಮೇಲೆ ನಿಜಕ್ಕು ಪರಿಣಾಮಕಾರಿ ಪ್ರಭಾವ ಬೀರಲಿದೆ ಎಂದು ಸಲಹೆ ನೀಡಿದರು.
ಮಾಜಿ ವಿಧಾನಪರಿಷತ್ತಿನ ಸದಸ್ಯರಾದ ಗಣೇಶ ಕಾರ್ಣಿಕ್ ಮಾತನಾಡಿ, ಯಾವುದೇ ಸಣ್ಣ ಕೆಲಸಗಳು ಆಸಕ್ತಿಯಿಂದ ನಿರ್ವಹಿಸಿ. ಕಾನೂನು ಪದವೀಧರರಾಗಿ ಹೊರಹೊಮ್ಮುವಾಗ ಉತ್ತಮ ವಕೀಲನಾಗುವ ಜೊತೆಗೆ ಸಮಾಜಮುಖಿ ಪ್ರಜೆಯಾಗಿ ಕೆಲಸ ಮಾಡಿ. ಶಿಕ್ಷಣ ನಮ್ಮಲ್ಲಿರುವ ಅದ್ಭುತ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪೂರಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕರಾದ ಎಂ.ಆರ್. ಅನಂತದತ್ತ, ಹೆಚ್.ಸಿ. ಶಿವಕುಮಾರ್, ಆಜೀವ ಸದಸ್ಯರಾದ ವಸಂತಕುಮಾರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಬಸಪ್ಪ ಸ್ವಾಗತಿಸಿ, ವಿದ್ಯಾರ್ಥಿನಿ ಬಹುಳ ಪ್ರಾರ್ಥಿಸಿದರು. ಇದೇ ವೇಳೆ ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೌನಾಚರಣೆ ಅರ್ಪಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post