ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಲಿತ ಅತಿಥಿ ಉಪನ್ಯಾಸಕಿಯೋರ್ವರನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ನಗರದ ಎನ್‍ಇಎಸ್ ಆಡಳಿತ ಕಛೇರಿಯ ಪ್ರಧಾನದ್ವಾರದಲ್ಲಿ ಪ್ರತಿಭಟನೆ ನಡೆಸಿದರು.
ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಾಪಿಸಿದ ಸಂಸ್ಥೆ ರಾಷ್ಟ್ರೀಯ ಶಿಕ್ಷಣ ಸಮಿತಿಯಾಗಿದೆ. ಪ್ರಸ್ತುತ ಆಡಳಿತ ಮಂಡಳಿ ಮೇಲ್ಜಾತಿಗೆ ಸೇರಿದ ನೌಕರರಿಗೆ ಮನ್ನಣೆಯನ್ನು ನೀಡುತ್ತಾ ಬಂದಿದ್ದು, ದಲಿತ ಮತ್ತು ಹಿಂದುಳಿದ ವರ್ಗದ ನೌಕರರನ್ನು ಶೋಷಣೆ ಮಾಡುತ್ತಲೇ ಬರುತ್ತಿದೆ. ಎಂದು ಆಪಾದಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎನ್‍ಇಎಸ್ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಈ ಪ್ರಕರಣ ಇವತ್ತಿನವರೆಗೂ ತಮ್ಮ ಗಮನಕ್ಕೆ ಬಂದೇ ಇರಲಿಲ್ಲ. ಸಂತ್ರಸ್ತೆಯು ಕಾಲೇಜಿನ ಪ್ರಾಚಾರ್ಯರಿಗಾಗಲೀ, ತಮಗಾಗಲೀ ಯಾವುದೇ ದೂರನ್ನು ಇವತ್ತಿನವರೆಗೂ ನೀಡಿಲ್ಲ. ಅವರ ಇಂದಿನ ಪ್ರತಿಭಟನೆಯ ಸಂದರ್ಭದಲ್ಲಿ ತಮಗೆ ನೀಡಿದ ದೂರಿನಲ್ಲಿ ಭದ್ರಾವತಿಯ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಕುರಿತು ದೂರು ದಾಖಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ ಪೊಲೀಸರಾಗಲೀ, ಸಂತ್ರಸ್ತೆಯಾಗಲೀ ಈ ಕುರಿತು ತಮ್ಮ ಗಮನಕ್ಕೆ ತಂದಿಲ್ಲ. ಎಫ್‍ಐಆರ್‍ನಲ್ಲಿ ಏನು ದಾಖಲಾಗಿದೆ ಎಂಬುದೂ ತಮಗೆ ತಿಳಿದಿಲ್ಲ. ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ತರನ್ನು ರಕ್ಷಿಸುವ ಉದ್ದೇಶವೂ ಇಲ್ಲ. ವಾಸ್ತವ ಏನಿದೆ ಎಂಬುದನ್ನು ಪರಿಶೀಲಿಸಲು ಆಡಳಿತ ಮಂಡಳಿಯು ತನ್ನ ಕಾನೂನು ವಿಭಾಗಕ್ಕೆ ಕೇಳಿಕೊಳ್ಳುತ್ತದೆ. ಅಲ್ಲಿಂದ ಅಭಿಪ್ರಾಯ ಬಂದ ನಂತರ ಮುಂದಿನ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
-ಡಾ.ಪಿ. ನಾರಾಯಣ್, ನಿರ್ದೇಶಕ ಜಿ.ಎನ್. ಸುಧೀರ, ಕುಲಸಚಿವ, ಪ್ರೊ.ಎನ್.ಕೆ.ಹರಿಯಪ್ಪ.
ದಲಿತರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬುದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಬಿ.ಆರ್.ಪಿ.ಯಲ್ಲಿರುವ ಎನ್‍ಇಎಸ್ ಪದವಿಪೂರ್ವ ಕಾಲೇಜಿನಲ್ಲಿ ದಲಿತ ಉಪನ್ಯಾಸಕಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಮತ್ತು ಜಾತಿನಿಂಧನೆ ಪ್ರಕರಣ ಸಾಕ್ಷಿಯಾಗಿದೆ. ಬಿ.ಆರ್.ಪಿ.ಯಲ್ಲಿರುವ ಎನ್‍ಇಎಸ್ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡಿದ್ದು ಅದೇ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಓರ್ವರು ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ಥೆಯ ಮೇಲೆ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ. ಈ ವಿಷಯವಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರೂ ಇಲ್ಲಿಯವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ, ಈ ಮಧ್ಯೆ ಆಡಳಿತ ಮಂಡಳಿ ಸಂತ್ರಸ್ಥೆಯನ್ನು ಕೆಲಸದಿಂದ ತೆಗೆದು ಹಾಕಿರುತ್ತಾರೆ. ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ರಕ್ಷಣೆಯೇ ಇಲ್ಲದಂತ್ತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಕೆಲಸದಿಂದ ತೆಗೆದುಹಾಕಲ್ಪಟ್ಟ ಸಂತ್ರಸ್ಥೆಯನ್ನು ಆಡಳಿತ ಮಂಡಳಿಯು ವೃತ್ತಿಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ವಿರುದ್ರ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್ ಬಿ.ಎ., ಹನುಮಂತಪ್ಪ, ಮನು, ನಾಗೇಂದ್ರ, ಚಂದ್ರು, ಹನುಮಕ್ಕ, ಪುಷ್ಪ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















