ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲರ ಪರಿಶ್ರಮ ಮತ್ತು ಸಾರ್ವಜನಿಕರ ಸಹಕಾರದಿಂದ ಈ ಬಾರಿಯ ಶಿವಮೊಗ್ಗ ದಸರಾ (Shivamogga Dasara) ಅದ್ಧೂರಿಯಾಗಿ ಯಶಸ್ವಿಯಾಗಿದೆ. ಈ ನಡುವೆ ಸಂಭವಿಸಿದ ಅವಘಡಕ್ಕೆ ಯಾರನ್ನೋ ಒಬ್ಬರನ್ನು ಹೊಣೆ ಮಾಡುವ ಬದಲು ನಾವೆಲ್ಲರೂ ಜವಾಬ್ದಾರರಾಗಿದ್ದೇವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ (Chenni) ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳಿನಿಂದ 14 ಸಮಿತಿಗಳನ್ನು ರಚಿಸಿ ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಸಲಾಗಿತ್ತು. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸಾರ್ವಜನಿಕರೂ ದಸರಾದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದರು.
ಪೌರ ಕಾರ್ಮಿಕರ ಪರಿಶ್ರಮಕ್ಕೆ ಮೆಚ್ಚುಗೆ
ದಸರಾ ಉತ್ಸವದ ಯಶಸ್ಸಿನ ಹಿಂದೆ ಪೌರ ಕಾರ್ಮಿಕರ ಪರಿಶ್ರಮವೂ ಮಹತ್ವದ್ದಾಗಿದೆ. ಅವರು ಹಗಲಿರುಳು ಶ್ರಮಿಸಿ ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ದಸರಾ ಸಂದರ್ಭದಲ್ಲಿ ಇಡೀ ಶಿವಮೊಗ್ಗ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ಎಂದು ಚನ್ನಬಸಪ್ಪ ಹೇಳಿದರು.
ಉತ್ಸವ ಯಶಸ್ವಿಯಾಗಲು ಶ್ರಮಿಸಿದ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ವಿವಿಧ ಇಲಾಖೆಗಳ ಸಿಬ್ಬಂದಿ, ಪೌರ ಕಾರ್ಮಿಕರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
Shivamogga Dasara: ‘ದೇವಿ ತನ್ನ ಒಂದು ಕೈ ಕಳೆದುಕೊಂಡು ಭಕ್ತರನ್ನು ಕಾಪಾಡಿದ್ದಾಳೆ’
ದಸರಾ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿದ ಘಟನೆಯನ್ನು ಉಲ್ಲೇಖಿಸಿದ ಶಾಸಕ ಚನ್ನಬಸಪ್ಪ, ದೊಡ್ಡ ಅನಾಹುತ ಸಂಭವಿಸದೆ ಉತ್ಸವ ಸಂಪನ್ನಗೊಂಡಿರುವುದಕ್ಕೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದವೇ ಕಾರಣ ಎಂದು ಹೇಳಿದರು.
“ದೇವಿ ತನ್ನ ಒಂದು ಕೈಯನ್ನು ಕಳೆದುಕೊಂಡು ಭಕ್ತರನ್ನು ಕಾಪಾಡಿದ್ದಾಳೆ. ಮಾವುತನ ರಕ್ಷಣೆಯೂ ಆಗಿದೆ. ಪವಾಡಸದೃಶ ರೀತಿಯಲ್ಲಿ ದಸರಾ ಸಾಂಗವಾಗಿ ಸಂಪನ್ನಗೊಂಡಿದೆ. ಇದಕ್ಕಾಗಿ ಚಾಮುಂಡೇಶ್ವರಿ ತಾಯಿಗೆ ಭಕ್ತಿಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ” ಎಂದರು.

ಹೊಸ ಚಾಮುಂಡೇಶ್ವರಿ ವಿಗ್ರಹ ನಿರ್ಮಾಣ
ಅವಘಡದ ಹಿನ್ನೆಲೆಯಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವಂತೆ ಹಿರಿಯರು ಸಲಹೆ ನೀಡಿದ್ದಾರೆ. ಈ ಕುರಿತು ಭಾವನಾತ್ಮಕ ವಿಚಾರಗಳೂ ಇದ್ದು, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಚಾಮುಂಡೇಶ್ವರಿ ದೇವಿಯ ಹೊಸ ವಿಗ್ರಹವನ್ನು ಯಥಾಸ್ಥಿತಿಯಲ್ಲಿ ನಿರ್ಮಿಸಲು ಮಹಾನಗರ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಸರಾ ಶಿವಮೊಗ್ಗದ ಊರ ಹಬ್ಬವಾಗಿದೆ. ಅವಘಡ ಸಂಭವಿಸಿದಾಗ ‘ನಾವು ಜವಾಬ್ದಾರರಲ್ಲ’ ಎಂಬ ಮನೋಭಾವ ಹೊಂದುವುದು ಸರಿಯಲ್ಲ. ಎಲ್ಲರೂ ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕು. ಈ ಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಎಚ್ಚರಿಕೆಯ ಗಂಟೆಯಾಗಿದೆ ಎಂದರು.

ಮೊದಲ ಬಾರಿಗೆ ಆನೆಗೆ ಅಂಬಾರಿ
ಮೊದಲ ಬಾರಿಗೆ ಈ ಆನೆಗೆ ಅಂಬಾರಿ ಹೊರಿಸಲಾಗಿತ್ತು. ಸಾಗರ್ ಆನೆಗೂ ಇದು ಮೊದಲ ಅನುಭವವಾಗಿದ್ದರಿಂದ ಘಟನೆ ಸಂಭವಿಸಿರಬಹುದು ಎಂದು ಚನ್ನಬಸಪ್ಪ ಹೇಳಿದರು.
ಯಾವುದೇ ಲೋಪಗಳಿದ್ದರೆ ತನಿಖೆ ನಡೆಯಲಿದೆ. ಘಟನೆ ಕುರಿತು ಅನುಮಾನಗಳನ್ನು ವ್ಯಕ್ತಪಡಿಸುವುದಕ್ಕೆ ನಮ್ಮ ವಿರೋಧವಿಲ್ಲ. ಮುಂದಿನ ವರ್ಷವೂ ಅಂಬಾರಿ ಮೆರವಣಿಗೆ ನಡೆಯಬೇಕು. ಅದಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಮತ್ತು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಚಾಮುಂಡೇಶ್ವರಿ ದೇವಿಯ ಯಾವುದೇ ಆಭರಣದಲ್ಲಿ ವ್ಯತ್ಯಾಸವಾಗಿಲ್ಲ. ಎಲ್ಲ ಆಭರಣಗಳೂ ಸುರಕ್ಷಿತವಾಗಿವೆ. ಕಾನೂನಿನ ಪ್ರಕಾರ ವಿಮೆ ಸೇರಿದಂತೆ ಅಗತ್ಯ ವ್ಯವಸ್ಥೆಗಳಿರುತ್ತವೆ ಎಂದು ಶಾಸಕ ಚನ್ನಬಸಪ್ಪ ಸ್ಪಷ್ಟಪಡಿಸಿದರು.
ಹೊಸ ವಿಗ್ರಹ ನಿರ್ಮಾಣ ಸೇರಿದಂತೆ ಅಗತ್ಯ ಕಾರ್ಯಗಳನ್ನು ಮಹಾನಗರ ಪಾಲಿಕೆಯ ಮೂಲಕವೇ ಕೈಗೊಳ್ಳಲಾಗುವುದು. ಪಾಲಿಕೆ ನಾಗರಿಕರ ಹಣದಿಂದ ನಡೆಯುವ ಸಂಸ್ಥೆಯಾಗಿದ್ದು, ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ. ಪ್ರತ್ಯೇಕವಾಗಿ ತನಿಖೆಗೆ ಒತ್ತಾಯಿಸುವುದಿಲ್ಲ ಎಂದರು.
Also Read>> ಶಿವಮೊಗ್ಗ ದಸರಾ ಸೋಮಣ್ಣ ಆನೆಯ ಕುರಿತು ಮರುಗಿದ ನಟಿ ರಮ್ಯಾ ಆಕ್ರೋಶದ ಪ್ರತಿಕ್ರಿಯೆಯೇನು?
ವಿವಿಧ ಇಲಾಖೆ, ಸಂಘ-ಸಂಸ್ಥೆಗಳಿಗೆ ಕೃತಜ್ಞತೆ
ಚಾಮುಂಡೇಶ್ವರಿ ದೇವಿ ಎಲ್ಲರನ್ನೂ ರಕ್ಷಿಸಿದ್ದಾಳೆ. ಅರಣ್ಯ ಇಲಾಖೆಯ ಸಿಬ್ಬಂದಿಯೂ ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಹಾಗೂ ವಿವಿಧ ಸಂಘ-ಸಂಸ್ಥೆಗಳು ದಸರಾ ಯಶಸ್ಸಿಗೆ ಕೈಜೋಡಿಸಿವೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಚನ್ನಬಸಪ್ಪ ಹೇಳಿದರು.
ಆರ್ಎಸ್ಎಸ್ ವಿಜಯದಶಮಿ ಪಥಸಂಚಲನದ ಕುರಿತು ಪ್ರತಿಕ್ರಿಯಿಸಿದ ಚನ್ನಬಸಪ್ಪ, “ನಾನು ವಿಜಯದಶಮಿ ಪಥಸಂಚಲನದಲ್ಲಿ ಭಾಗವಹಿಸುತ್ತೇನೆ. ಆರ್ಎಸ್ಎಸ್ ರಾಷ್ಟ್ರೀಯ ಮಟ್ಟದ ದೊಡ್ಡ ಸಂಸ್ಥೆಯಾಗಿದೆ. ಕಡ್ಡಾಯ ಅನುಮತಿ ಸೇರಿದಂತೆ ಇತರ ವಿಚಾರಗಳ ಬಗ್ಗೆ ಸಂಘದ ಪ್ರಮುಖರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್. ಜ್ಞಾನೇಶ್ವರ್, ಮೋಹನ್ ರೆಡ್ಡಿ, ಪ್ರಭಾಕರ್, ಶ್ರೀನಾಗ್, ನವುಲೆ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








