ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆಎನ್’ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ #JNNCE ಡಿ.13 ಮತ್ತು 14ರಂದು ಮಲ್ಟಿಮಿಡಿಯಾ ಪ್ರೊಸೆಸಿಂಗ್, ಕಮ್ಯುನಿಕೇಷನ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕುರಿತ ನಾಲ್ಕನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಪ್ರಾಂಶುಪಾಲ ಡಾ.ವೈ. ವಿಜಯಕುಮಾರ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಐಇಇಇ ಬೆಂಗಳೂರು ಮತ್ತು ಮಂಗಳೂರು ವಿಭಾಗ, ಐಇಟಿಇ ಶಿವಮೊಗ್ಗ ಕೇಂದ್ರ, ಐಇಇಇ ಕಾಮ್ಸಾಕ್ ಬೆಂಗಳೂರು ವಿಭಾಗದ ಸಹಯೋಗದಲ್ಲಿ ಮಲ್ಟಿಮಿಡಿಯಾ ಪ್ರೊಸೆಸಿಂಗ್, ಕಮ್ಯುನಿಕೇಷನ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕುರಿತ ನಾಲ್ಕನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಕಾಲೇಜಿನ ಸರ್.ಎಂ.ವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಡಿ.13 ರ ಶುಕ್ರವಾರ ಬೆಳಗ್ಗೆ 10:00 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ.ಶ್ರೀನಿವಾಸ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಆಗಮಿಸಲಿದ್ದಾರೆ. ತಿಥಿಗಳಾಗಿ ಆಸ್ಟ್ರೇಲಿಯಾ ಡಿಕಿನ್ ವಿಶ್ವವಿದ್ಯಾಲಯದ ಡಾ.ಗ್ಯಾಂಗ್ ಲಿ, ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಉಪಸ್ಥಿತರಿರಲಿದ್ದಾರೆ.
Also read: ಶಿಕಾರಿಪುರ | ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪತಿಯಿಂದಲೇ ಪತ್ನಿಯ ಹತ್ಯೆ
ಡಿ.14 ರ ಶನಿವಾರ ಸಂಜೆ 04:00 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ತೇಜಸ್ ನೆಟ್‌ವರ್ಕ್ ಉಪಾಧ್ಯಕ್ಷ ಅನಿನ್‌ಧ್ಯ ಸಹ, ಇನ್ಫೋಸಿಸ್ ಕಂಪನಿ ಸಹ ಉಪಾಧ್ಯಕ್ಷೆ ಜ್ಞಾನಪ್ರಿಯಾ, ಎನ್‌ಇಎಸ್ ಖಜಾಂಚಿ ಡಿ.ಜಿ.ರಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಮಾತನಾಡಿ, ಎರಡು ದಿನಗಳ ವಿಚಾರ ಸಂಕಿರಣದಲ್ಲಿ ವಿವಿಧ ಗೋಷ್ಟಿಗಳು ನಡೆಯಲಿದ್ದು, ಕ್ವಾಂಟಮ್ ಇನ್ಫಾರ್ಮೇಷನ್ ಟೆಕ್ನಾಲಜಿ ಫೋಟೊಸಿಕ್ಸ್ ಕುರಿತು ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ.ಶ್ರೀನಿವಾಸ, ಇಂಟರ್ನೆಟ್‌ಗಾಗಿ ಟ್ರಾನ್ಸ್ ಪೋರ್ಟ್ ಸರ್ವಿಸಸ್: ಎಪಿಐ ಪ್ರಮಾಣಿತ ವಿಷಯ ಕುರಿತು ನಾರ್ವೆ ಓಸ್ಲೊ ವಿಶ್ವವಿದ್ಯಾಲಯದ ಪ್ರೊ.ಮೈಕಲ್ ವೆಲ್‌ಜಿ, ಟಿಸಿಪಿ ರೂಟರ್ ಬಳಸಿ ಅಗ್ರಿಗೇಟಿಂಗ್ ಮಲ್ಟಿಪಲ್ ಇಂಟರ್ನೆಟ್ ಕನೆಕ್ಷನ್ ಕುರಿತು ಎನ್‌ಐಟಿಕೆ ಸೂರತ್ಕಲ್ ಪ್ರಾಧ್ಯಾಪಕ ಡಾ.ಮೊಹಿತ್.ಪಿ.ತಾಲಿನಿ, ಸೈಬರ್ ಪ್ರಾಪಾಖಾಂಡದ ಸ್ಟ್ರಾಟೆಜಿಕ್ ಸುಪ್ರೆಷನ್ ಕುರಿತು ಆಸ್ಟ್ರೇಲಿಯಾದ ಡಿಕಿನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗ್ಯಾಂಗ್ ಲಿ, ಇನೊವೇಷನ್ ಮೈಂಡ್ ಸೆಟ್ ಕುರಿತು ಜ್ಞಾನಪ್ರಿಯ, ವೈರ್‌ಲೆಸ್ ನೆಟ್ವರ್ಕ್ ಮೂಲಕ ಎಐ ಮತ್ತು ಎಂಎಲ್ ಲರ್ನಿಂಗ್ ಕುರಿತು ತೇಜಸ್ ನೆಟ್‌ವರ್ಕ್ ಉಪಾಧ್ಯಕ್ಷ ಅನಿನ್‌ಧ್ಯ ಸಹ ಮಾತನಾಡಲಿದ್ದಾರೆ.
ಇದೇ ವೇಳೆ ದೇಶದ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸುವ ಸಂಶೋಧನಾರ್ಥಿಗಳಿಂದ ಆಯ್ದ 60 ನಾವೀನ್ಯ ಪ್ರಬಂಧಗಳನ್ನು ಮಂಡಿಸಲಾಗುತ್ತಿದ್ದು, ಮೂರು ವಿಶೇಷ ಪ್ರಬಂಧಕ್ಕೆ ಉತ್ತಮ ಪ್ರಬಂಧ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಕಾರ್ಯಕ್ರಮ ಸಂಯೋಜಕರಾದ ಡಾ.ಶೀಲಾ, ಡಾ.ಪ್ರಮೋದ್, ಲೆಕ್ಕಪತ್ರ ವಿಭಾಗ ಮುಖ್ಯಸ್ಥ ಗುರುರಾಜ್.ಎಂ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post