ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನ ಆಯ್ದ ಕೆಲವು ಭಾಗಗಳಲ್ಲಿನ ತೋಟಗಳಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಅವರು ಇಂದು ತೀರ್ಥಹಳ್ಳಿಯ ನಾಲೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ತೋಟಗಳಿಗೆ ತೋಟಗಾರಿಕೆ ಬೆಳೆಗಾರರು, ಕೃಷಿ ಸಂಶೋಧಕರು, ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲೆಚುಕ್ಕೆ ರೋಗದಿಂದ ಬಾದಿತರಾಗಿರುವ ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದ ಅವರು ಅವ್ಯಾಹತವಾಗಿ ಬೀಳುತ್ತಿರುವ ಮಳೆಯಿಂದಾಗಿ ಸಕಾಲದಲ್ಲಿ ಈ ರೋಗದ ನಿಯಂತ್ರಣಕ್ಕೆ ಔಷಧ ಸಿಂಪರಣೆ ಸಾಧ್ಯವಾಗುತ್ತಿಲ್ಲವಾದ್ದರಿಂದ ರೋಗ ಹತೋಟಿಗೆ ಬರುತ್ತಿಲ್ಲವೆಂದು ತಜ್ಞರು ತಿಳಿಸಿದ್ದಾರೆ. ಮಳೆ ಕಡಿಮೆಯಾಗುತ್ತಿದ್ದಂತೆ ಹಾಗೂ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬಿಸಿಲು ಬಿದ್ದಲ್ಲಿ ಸಹಜವಾಗಿ ಈ ರೋಗ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದರು.
ಈ ರೋಗದ ನಿಯಂತ್ರಣಕ್ಕೆ ಬೇಕಾಗಿರುವ ಔಷಧ ಹೆಚ್ಚಿನ ಬೆಲೆಯದ್ದಾಗಿದೆ. ಮಾರುಕಟ್ಟೆಯಲ್ಲಿ ಈ ಔಷಧ ಸ್ಪರ್ಧಾತ್ಮಕ ಬೆಲೆಗೆ ದೊರಕುವಂತೆ ಯತ್ನಿಸಲಾಗುವುದು. ಅಲ್ಲದೇ ಔಷಧ ಖರೀದಿಗೆ ಸರ್ಕಾರದಿಂದ ಸಹಾಯಧನ ನೀಡುವ ಆದೇಶ ಇಂದು ಸಂಜೆ ಹೊರಬೀಳುವ ನಿರೀಕ್ಷೆ ಇದೆ ಎಂದ ಅವರು ಔಷಧ ಸಿಂಪರಣೆಗೆ ಸಕಾಲದಲ್ಲಿ ಕೊನೆಗಾರರು ಸಿಗದಿರುವುದರಿಂದ ಇತ್ತೀಚೆಗೆ ಸಂಶೋಧಿಸಿರುವ ಹಗುರವಾದ ದೋಟಿಯನ್ನು ಖರೀದಿಸಲು ಸರ್ಕಾರ ಸಹಾಯಧನ ನೀಡುವಂತೆ ಅಥವಾ ಕೃಷಿ ಇಲಾಖೆಯಿಂದಲೆ ಪೂರೈಸಲು ಮಾನ್ಯ ಮುಖ್ಯಮಂತ್ರಿಗಳಿಗೆ ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಔಷಧಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಔಷಧ ಮಾರಾಟ ಮಾಡುವವರ ಔಷಧ ಅಂಗಡಿಗಳಿಗೆ ದಿಡೀರ್ ದಾಳಿ ನಡೆಸಿ, ಅಂತಹವರನ್ನು ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ತಜ್ಞ ವಿಜ್ಞಾನಿಗಳು ಸೋಂಕು ಬಾದಿತ ಕೃಷಿಕರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆ ನೀಡಲಿದ್ದಾರೆ. ಅಲ್ಲದೆ ಮರ ಹತ್ತಿ ಔಷಧ ಸಿಂಪಡಿಸುವ ಬದಲಾಗಿ ಬುಡಕ್ಕೆ ಸಿಂಪಡಿಸುವುದರಿಂದ ರೋಗ ನಿಯಂತ್ರಿಸುವ ವಿಧಾನಗಳ ಬಗ್ಗೆ ಸಂಶೋಧನೆ ನಡೆಸುವಂತೆ ಸೂಚಿಸಲಾಗಿದೆ ಎಂದರು.
ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಹಾಗೂ ಸಿಬ್ಬಂಧಿಗಳೊಂದಿಗೆ ವೃತ್ತಿ ಬದುಕಿನ ಖಾಸಗಿಯಾಗಿರುವ ಸಮಸ್ಯೆಗಳನ್ನು ಆಲಿಸಿ ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಧಿಕಾರಿ ಸಿಬ್ಬಂಧಿಗಳು ಕೆಲವು ಸಲಹೆ -ಸೂಚನೆಗಳನ್ನು ನೀಡಿದ್ದು, ಅವುಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆರೆಗಳ ಒತ್ತುವರಿ ತೆರವುಗೊಳಿಸಲು ಹೈಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಕ್ರಮವಹಿಸುತ್ತಿದ್ದಾರೆ. ಒತ್ತುವರಿದಾರರನ್ನು ತೆರವುಗೊಳಿಸಲು ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಬೆಳೆದ ಬೆಳೆ ಕಟಾವು ಮಾಡಿಕೊಳ್ಳುವವರೆಗೆ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವುದಾಗಿಯೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಡಾ. ಹೇಮ್ಲಾನಾಯ್ಕ್, ಡಾ. ಗಂಗಾಧರನಾಯ್ಕ್, ಡಾ. ನಾಗರಾಜ್ ಅಡಿವೆಪ್ಪರ್, ಡಾ. ದೇಶ್‌ಮುಖ್, ಡಾ. ರವಿಕುಮಾರ್, ಡಾ. ನಿರಂಜನಕೇಶವಾಪುರ್, ಡಾ.. ರಾಮಚಂದ್ರ ಮಡಿವಾಳರ್, ಸಿದ್ಧಲಿಂಗೇಶ್, ಪ್ರದೀಪ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ತೋಟಗಾರಿಕೆ ಬೆಳೆಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post