ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ಶಿವಮೊಗ್ಗ ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳು ಮತ್ತು ವಚನಾಭಿಮಾನಿಗಳ ಸಹಕಾರದೊಂದಿಗೆ ಶಿವಮೊಗ್ಗ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಮಾ.24 ಹಾಗೂ 25 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡರು ತಿಳಿಸಿದರು.
ಇಂದು ಬಸವಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಸವಾಲುಗಳು – ವಚನಗಳಲ್ಲಿ ಉತ್ತರ ‘ ಎಂಬ ಚಿಂತನೆಯೊಂದಿಗೆ ನಡೆಯಲಿರುವ ಈ ಸಮ್ಮೇಳನಕ್ಕೆ ಶಿವಮೊಗ್ಗದ ಶ್ರೀ ಬೆಕ್ಕಿನಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಸರ್ವಾಧ್ಯಕ್ಷರಾಗಿರಲಿದ್ದಾರೆ. ಸಮ್ಮೇಳನದ ಉದ್ಘಾಟನಾ ಸಮಾರಂಭವು ಮಾರ್ಚ್ 24 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿದ್ದು, ಶರಣ ಸಾಹಿತ್ಯ ಪರಿಷತ್ ನ ಮಹಾಪೋಷಕರಾದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿ, ಎಲ್ಲ ಜಿಲ್ಲೆಗಳಲ್ಲೂ ಶರಣ ಸಾಹಿತ್ಯ ಪ್ರಸಾರಕ್ಕೆ ಅಮೋಘ ಕೊಡುಗೆ ನೀಡುತ್ತಿರುವ ಸುತ್ತೂರು ಸಂಸ್ಥಾನದ ಸುತ್ತೂರು ಶ್ರೀಗಳು ಇದರ ಸಾನಿಧ್ಯ ವಹಿಸುತ್ತಿರುವುದು ಶಿವಮೊಗ್ಗದ ಜನತೆ ಹೆಮ್ಮೆ ಪಡುವ ವಿಚಾರ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ ಸೋಮಶೇಖರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ., ಮಾಜಿ ವಿಧಾನ ಪರಿಷತ್ ಶಾಸಕರು ಹಾಗೂ ಉದ್ಯಮಿ ಎಸ್. ರುದ್ರೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಅಂಬ್ರಯ್ಯಮಠ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಮಾಜದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಉಪಸ್ಥಿತರಿರಲಿದ್ದಾರೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್. ಎನ್. ಮಹಾರುದ್ರ ಮಾತನಾಡಿ, ಶಿಕಾರಿಪುರ ತಾಲ್ಲೂಕಿನ ಉಡುತಡಿಯಿಂದ ಯಾತ್ರೆಯ ಮೂಲಕ ಆಗಮಿಸುವ ‘ಅಕ್ಕಮಹಾದೇವಿ ಜ್ಯೋತಿ’ಯನ್ನು ಶಿವಮೊಗ್ಗದ ಅಕ್ಕಮಹಾದೇವಿ ವೃತ್ತದಲ್ಲಿ ಸ್ವಾಗತಿಸಿ, ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಗುವುದು ಎಂದರು.
ಎರಡು ದಿನಗಳ ಕಾಲ ನಡೆಯುವ ಶರಣಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ಮತ್ತು ಪ್ರತಿದಿನ ವಚನಗಾಯನಗಳು ನಡೆಯಲಿವೆ ಎಂದರು.
ಮಾ.25ರ ಸಂಜೆ 4 ರಿಂದ 5.30 ರವರೆಗೆ ನಡೆಯಲಿರುವ ಈ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ನಿಡಸೋಸಿಯ ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಆನಂದಪುರದ ಶ್ರೀ ಮುರುಘಾಮಠ ಹಾಗೂ ಶಿವಮೊಗ್ಗದ ಶ್ರೀ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಮ್ಮೇಳನಾಧ್ಯಕ್ಷರಾಗಿ ಉಪಸ್ಥಿತರಿರುತ್ತಾರೆ. ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್. ಎಸ್. ಮಹಾರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಎಂ. ಎಸ್. ಆಶಾದೇವಿ ಸಮಾರೋಪ ನುಡಿಗಳನ್ನು ಆಡಲಿದ್ದಾರೆ ಎಂದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ. ಜಗದೀಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಇಂದು ನಮ್ಮ ನಡುವೆ ಇರುವ ಹಲವು ಸಮಸ್ಯೆಗಳಿಗೆ ಚಿಂತನಾತ್ಮಕವಾಗಿ ಉತ್ತರ ಹುಡುಕುವುದರ ಜೊತೆಗೆ ಬಸವಾದಿ ಶರಣರ ಅಶಯದಂತೆ ಸಮಾಜದ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತರುವ ಜಾತ್ಯಾತೀತ ಕಾರ್ಯಕ್ರಮ ಇದಾಗಿದೆ. ಈ ಸಮ್ಮೇಳನದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಶರಣರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೊಷ್ಟಿಯಲ್ಲಿ ಪ್ರಮುಖರಾದ ಜ್ಯೋತಿಪ್ರಕಾಶ್, ಬೆನಕಪ್ಪ, ಲವ ಕುಮಾರ್, ರುದ್ರೇಶ್, ರುದ್ರಮುನಿ ಸಜ್ಜನ್, ಆರ್.ಎಸ್.ಹಾಲಸ್ವಾಮಿ, ಗಾಯತ್ರಿ ಪಟೇಲ್, ಬಸವನಗೌಡ ಮಾಳಗಿ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















