ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗ ಶಿವಮೊಗ್ಗದ ವತಿಯಿಂದ ಸೆ.13ರಂದು ಮಧ್ಯಾಹ್ನ 2 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ರಮೇಶ್ ಶಂಕರಘಟ್ಟ ಅವರ ಪದಗ್ರಹಣ ಸಮಾರಂಭ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳು ಒಗ್ಗೂಡಿ ಜಾಗೃತಿಪಡಿಸಲು ಕಾಂಗ್ರೆಸ್ ಪಕ್ಷದ ವರಿಷ್ಟ ರಾಹುಲ್‍ಗಾಂಧಿಯವರು #Rahul Gandhi ದೇಶಾದ್ಯಂತ ಹಿಂದುಳಿದ ವರ್ಗಗಳ ಸಮಾವೇಶಗಳನ್ನು ಆಯೋಜಿಸಬೇಕೆಂದು ಕರೆ ನೀಡಿದ್ದು, `ವಾಯ್ಸ್ ಆಫ್ ಓಬಿಸಿ’ ಅಡಿಯಲ್ಲಿ ರಾಜ್ಯದಲ್ಲಿ 100 ಸಮಾವೇಶಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಸೆ.13ರಂದು ನಡೆಯುವ ಸಮಾರಂಭದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಬಲ್ಕೀಶ್‍ಬಾನು ಹಾಗೂ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮೇಶ್ ಶಂಕರಘಟ್ಟ ಮಾತನಾಡಿ, ನನ್ನನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೂತನ ಜಿಲ್ಲಾಧ್ಯಕ್ಷನಾಗಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವುದರ ಮೂಲಕ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇನೆ. ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು, ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವುದರ ಜೊತೆಗೆ ಎಲ್ಲಾ ತಾಲ್ಲೂಕುಗಳಲ್ಲೂ ಸಮಾವೇಶ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಸ್.ಕೆ. ಮರಿಯಪ್ಪ, ಇಕ್ಕೇರಿ ರಮೇಶ್, ಉಮೇಶ್, ಎಸ್.ಪಿ. ಶೇಷಾದ್ರಿ, ಭಾಸ್ಕರ್, ವಿಶ್ವನಾಥ್ ಕಾಶಿ, ವಿನಯ್, ಶರತ್ ಮರಿಯಪ್ಪ, ಶಿವಣ್ಣ, ಡಿ.ಸಿ. ನಿರಂಜನ್, ಜಿ.ಡಿ. ಮಂಜುನಾಥ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post