ಶಿವಮೊಗ್ಗ: ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಹರಡದಂತೆ ವ್ಯಾಪಕ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು.
ಅವರು ಶುಕ್ರವಾರ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಈ ವ್ಯಾಪ್ತಿಯಲ್ಲಿ ಐದು ಮರಣ ಸಂಭವಿಸಿದ್ದು, ಇದರಲ್ಲಿ ಒಂದು ಪ್ರಕರಣ ಮಂಗನಕಾಯಿಲೆಯಿಂದ ಆಗಿರುವುದು ದೃಢಪಟ್ಟಿದೆ. ಉಳಿದ ಪ್ರಕರಣಗಳಲ್ಲಿ ವರದಿ ಬರಬೇಕಾಗಿದೆ. ಮಂಗನ ಕಾಯಿಲೆ ಹರಡದಂತೆ ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಅಂಬುಲೆನ್ಸ್ ಸೇವೆ ದಿನದ 24 ಗಂಟೆ ಕಾಲ ಲಭ್ಯವಿರಲಿದೆ. ಮಂಗನ ಕಾಯಿಲೆ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಹಾಗೂ ತುರ್ತು ಕ್ರಮಕ್ಕಾಗಿ ಸಹಾಯ ಕೇಂದ್ರವನ್ನು ಆರಂಭಿಸಲಾಗಿದ್ದು, ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಸಾರ್ವಜನಿಕರು 104 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ದಾಖಲಿಸಬಹುದಾಗಿದೆ ಎಂದರು.
ಮಂಗಗಳು ಸಾವಿಗೀಡಾಗಿರುವ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಅಂತಹ ಕಡೆಗಳಲ್ಲಿ 50 ಮೀಟರ್ ವ್ಯಾಪ್ತಿಯಲ್ಲಿ ಯಾರೂ ತೆರಳಬಾರದು. ಔಷಧಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದವರು ತಿಳಿಸಿದರು.
ಹಿರಿಯ ಅಧಿಕಾರಿಗಳ ಸಭೆ: ಇದಕ್ಕೂ ಮೊದಲು ಸಾಗರ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿ ಅವರು, ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು.
ವೈದ್ಯರ ತಂಡಗಳನ್ನು ರಚಿಸಿ ಗ್ರಾಮಗಳಲ್ಲಿನ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರತಿಯೊಬ್ಬರೂ ರೋಗ ನಿರೋಧಕ ಚುಚ್ಚು ಮದ್ದು ಪಡೆದುಕೊಳ್ಳಲು ಹಾಗೂ ಕಾಡಿಗೆ ತೆರಳುವವರು ಡಿಎಂಪಿ ತೈಲವನ್ನು ಕಡ್ಡಾಯವಾಗಿ ಹಚ್ಚಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಬೇಕು.
ಗ್ರಾಮ ಪಂಚಾಯತ್ ವತಿಯಿಂದ ಮಂಗನಕಾಯಿಲೆ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಬೇಕು. ಮನೆಯ ಹಸುಗಳನ್ನು ಆದಷ್ಟು ಮೇಯಲು ಹೊರಗೆ ಬಿಡದೆ ಕೆಲವು ತಿಂಗಳ ಕಾಲ ಮನೆಯಲ್ಲಿಯೇ ಕಟ್ಟಿ ಮೇವು ಹಾಕಲು ಜನರಿಗೆ ಪ್ರೇರೇಪಿಸಬೇಕು. ಕಾಡಿಗೆ ತೆರಳುವ ಹಸುಗಳಿಗೆ ಸಹ ಸೂಕ್ತ ಮುನ್ನಚ್ಚರಿಕೆಯಾಗಿ ಔಷಧಿಯಲ್ಲಿ ಹಾಕಬೇಕು. ಪ್ರಸ್ತುತ ಅರಳಗೋಡು ಪಂಚಾಯತ್ ವ್ಯಾಪ್ತಿಯ ವಾಟೆಮಕ್ಕಿ, ಆರೋಡಿ, ನೆಲ್ಲಿಮಕ್ಕಿ ಹಾಗೂ ಹೆಗ್ಗೋಡು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಲಕ್ಷಣಗಳು ಕಂಡು ಬಂದಿದ್ದು, ಈ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿಲ್ಲದಿದ್ದರೆ ಸಮೀಪದ ಪಿಹೆಚ್‌ಸಿಗಳಿಂದ ನಿಯೋಜಿಸಬೇಕು ಎಂದು ಹೇಳಿದರು.
ಕಾಡಿನ ಒಳಗೆ ಹಣ್ಣಿನ ಸಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದು ಸೇರಿದಂತೆ ಮಂಗಗಳು ಊರಿನ ಸಮೀಪಕ್ಕೆ ಬಾರದಂತೆ ತಡೆಯಲು ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದರು.
ಸಾಗರ ಉಪ ವಿಭಾಗಾಧಿಕಾರಿ ದರ್ಶನ್, ತಹಶೀಲ್ದಾರ್ ರಶ್ಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post