ಶಿವಮೊಗ್ಗ: ವೈದ್ಯಕೀಯ ಕ್ಷೇತ್ರದಲ್ಲಿ ಪದವಿಯನ್ನು ಕೇವಲ ಸಮಾಜದಲ್ಲಿ ವೈದ್ಯರುಗಳಿಗೆ ಇರುವ ಗೌರವದ ಆಸೆಗಾಗಿ ಎಂಬಿಬಿಎಸ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಕೇಂದ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶ್ರಾಂತ ಮಹಾನಿರ್ದೇಶಕರಾದ ಡಾ.ಬಿ.ಡಿ. ಅಥಣಿ ಸಲಹೆ ನೀಡಿದರು.
ಪುರಲೆಯ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ 2013ರ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇರುವ ಗೌರವದ ಆಸೆಗಾಗಿ ಎಂಬಿಬಿಎಸ್ ಕೋರ್ಸ್ ಆಯ್ಕೆ ಮಾಡಿಕೊಳ್ಳಬಾರದು. ಇತ್ತೀಚೆಗೆ ನುರಿತ ಅನುಭವಿ ವೈದ್ಯರಾಗುವುದಕ್ಕೆ ಪದವಿ ಹಂತದ ಶಿಕ್ಷಣ ಸಾಕಾಗುವುದಿಲ್ಲ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸ್ನಾತಕೋತ್ತರದ ನಂತರ ಹಲವು ವೃತ್ತಿಪರ ವಿಷಯಗಳ ಅಧ್ಯಯನದ ಅಗತ್ಯವಿದೆ. ಉತ್ತಮ ವೈದ್ಯರಾಗಲು ವೈದ್ಯಕೀಯ ಜ್ಞಾನದ ಜೊತೆ ಕಾನೂನಾತ್ಮಕ ರೀತಿ-ರಿವಾಜುಗಳ ಕುರಿತು ತಿಳಿದುಕೊಂಡಿರಬೇಕು ಎಂದು ಹೇಳಿದರು.
ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವೈದ್ಯಕೀಯ ಕ್ಷೇತ್ರ ಸಂಬಂಧಿ ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರವಾಗಿ ಏರ್ಪಡಿಸುವುದರಿಂದ ಕಾಲೇಜಿನ ಸರ್ವೋತೊಮುಖ ಅಭಿವೃದ್ಧಿ ಸಾಧ್ಯ ಎಂದವರು ತಿಳಿಸಿದರು.
ನಂತರ ಮಾತನಾಡಿದ ಮಾಹೆ (MAHE) ವಿಶ್ವವಿದ್ಯಾನಿಲಯದ ಪ್ರಭಾರ ಉಪಕುಲಪತಿಗಳಾದ ಡಾ.ಪೂರ್ಣಿಮ ಬಾಳಿಗ ಬಿ ಅವರು, ಕೇವಲ ವೈದ್ಯರೆನಿಸಿಕೊಂಡು ತೃಪ್ತಿಪಡಬೇಡಿ. ಎಂಬಿಬಿಎಸ್ ನಂತರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಗೆದುಕೊಂಡು ದೇಶ-ವಿದೇಶಗಳಲ್ಲಿರುವ ಹಲವಾರು ಅವಕಾಶಗಳನ್ನು ಬಳಸಿಕೊಂಡು ದೇಶಕ್ಕೆ ಸೇವೆಯ ರೂಪದಲ್ಲಿ ವೈದ್ಯರು ಕೊಡುಗೆಯಾಗಬೇಕು ಎಂದರು.
ಶ್ರೇಷ್ಠ ವೈದ್ಯನಾಗಬೇಕಾದಲ್ಲಿ ಉತ್ತಮ ನಡುವಳಿಕೆಯನ್ನು ಅಳವಡಿಸಿಕೊಂಡು ಕಾಯಿಲೆಯಿಂದ ಬಳಲುವ ರೋಗಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕು. ಕಾಳಜಿಯಿಂದ ರೋಗಿಯ ಕುಂದುಕೊರತೆಯನ್ನು ಗಮನವಿಟ್ಟು ಆಲಿಸಿ, ಸ್ಪಂದಸಿದಾಗ ಅರ್ಧ ಕಾಯಿಲೆ ಗುಣಮುಖವಾಗಿರುತ್ತದೆ. ಪ್ರತಿ ವೈದ್ಯರು ತಮ್ಮ ವೃತ್ತಿಯಲ್ಲಿ ದಿನನಿತ್ಯ ಚಿಕಿತ್ಸೆ ನೀಡುವಾಗ ಪ್ರತಿ ಹಂತವನ್ನು ದಾಖಲಿಸಿಕೊಳ್ಳಬೇಕು. ವೈದ್ಯರಾದವರು ರೋಗಿಯ ಬಗ್ಗೆ ಸದಾ ಅನುಕಂಪ ಸಹಾನುಭೂತಿ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಡಿಕೆಲ ಸುಬ್ಬಯ್ಯ ಟ್ರಸ್ಟ್ ಅಧ್ಯಕ್ಷರಾದ ಟಿ. ಸುಬ್ಬರಾಮಯ್ಯ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ.ಎಸ್ ನಾಗೇಂದ್ರ, ಡಾ.ಲತಾ ನಾಗೇಂದ್ರ, ಡಾ.ಎಸ್. ಶ್ರೀನಿವಾಸ್, ಡಾ.ವಿನಯಾ ಶ್ರೀನಿವಾಸ್, ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ, ಪ್ರಮುಖರಾದ ಡಾ.ಆರ್.ಪಿ. ಪೈ, ಡಾ.ಬಿ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.
Discussion about this post