ಶಿವಮೊಗ್ಗ: ಶರಾವತಿ ಕಣಿವೆಯಲ್ಲಿ ಬೃಹತ್ ಭೂಗತ ಜಲವಿದ್ಯುತ್ ಯೋಜನೆ ಸರ್ವೇ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೃಕ್ಷಲಕ್ಷ ಆಂದೋಲನ ಕರ್ನಾಟಕ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಕುರಿತಂತೆ ಮಾತನಾಡಿದ ಆಂದೋಲನದ ಸದಸ್ಯರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಶರಾವತಿ ಕಣಿವೆಯಲ್ಲಿ ಕರ್ನಾಟಕ ಪವರ್ ಕಾರ್ಪೋರೇಷನ್ ನಿರ್ಮಿಸಲು ಉದ್ಧೇಶಿರುವ ಭೂಗತ ಜಲವಿದ್ಯುತ್ ಯೋಜನೆಯ ಸಮೀಕ್ಷಾ ಕಾಮಗಾರಿ ಆರಂಭಿಸಲು ತಯಾರಿ ನಡೆದಿದೆ. ಯೋಜನೆ ಜಾರಿಯಾದರೆ ವನ್ಯ ಜೀವಿ, ಪರಿಸರ, ಜನಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಕರ್ನಾಟಕ ಪವರ್ ಕಾರ್ಪೋರೇಷನ್ ನವದೆಹಲಿಯ ಖಾಸಗಿ ಸಂಸ್ಥೆಗೆ ಯೋಜನಾ ವರದಿ ತಯಾರಿಸಲು ಗುತ್ತಿಗೆ ನೀಡಿದೆ. ಇದೀಗ ಸಂಸ್ಥೆ ಸರ್ವೇ ಕಾಮಗಾರಿಗೆ ತಯಾರಿ ನಡೆಸಿದೆ. ಡ್ರಿಲ್ಲಿಂಗ್‌ಗಾಗಿ 15 ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ಪೋಟ ನಡೆಸಲು, ಸರ್ವೇ ನಡೆಸಲು ಕರ್ನಾಟಕ ಪವರ್ ಕಾರ್ಪೋರೇಷನ್ ಅರಣ್ಯ ಇಲಾಖೆಯ ಅನುಮತಿ ಕೇಳಿದೆ ಎಂದರು.
ಯೋಜನೆಗೆ ಅವಕಾಶ ನೀಡಿದಲ್ಲಿ ಶರಾವತಿ ಕಣಿವೆಯ ವನ್ಯಜೀವಿ ಹಾಗೂ ಅರಣ್ಯದ ಮೇಲೆ ನೇರವಾಗಿ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಭೂಗತ ಜಲವಿದ್ಯುತ್ ಯೋಜನೆಯ ಸಮೀಕ್ಷಾ ಕಾಮಗಾರಿಗಾಗಲೀ ಅಥವಾ ಡ್ರಿಲ್ಲಿಂಗ್ ಕಾಮಗಾರಿಗಾಗಲೀ ಅವಕಾಶ ಅಥವಾ ಒಪ್ಪಿಗೆ ನೀಡಬಾರದು ಎಂದು ಒತ್ತಾಯಿಸಿದರು.
ಜೋಗ ಜಲಪಾತದ ಬಳಿ ಪರಿಸರ ವನ್ಯಜೀವಿ ಅರಣ್ಯ ಕಾಯ್ದೆ ಪರವಾನಗಿ ಇಲ್ಲದೇ ಅಣೆಕಟ್ಟು ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದ ಅವರು, ವರ್ಷವಿಡೀ ಜೋಗ ಜಲಪಾತ ವೀಕ್ಷಣೆಗೆ ಅನುಕೂಲವಾಗುವಂತೆ ಅಣೆಕಟ್ಟು ನಿರ್ಮಿಸುವ ಕುರಿತಂತೆ ಜನತೆಗೆ ಸರಿಯಾದ ಮಾಹಿತಿ ನೀಡಿಲ್ಲ. ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸುವಾಗ ಸ್ಥಳೀಯ ಗ್ರಾಮ ಪಂಚಾಯಿತಿಯೊಂದಿಗೆ ಮಾತುಕತೆ ನಡೆಸಿಲ್ಲ ಎಂದರು.
ಉದ್ದೇಶಿತ ಸ್ಥಳದ ಪಕ್ಕದಲ್ಲಿ ಶರಾವತಿ ಅಭಯಾರಣ್ಯವಿದ್ದು, ನದಿಯ ಎರಡೂ ದಂಡೆಗಳಲ್ಲಿ ಅರಣ್ಯ ಭೂಮಿ ಇದೆ. ಅರಣ್ಯ ಹಾಗೂ ಪರಿಸರ ಪರವಾನಗಿ ಇಲ್ಲದೇ ಯೋಜನೆ ಜಾರಿ ಮಾಡಿದರೆ ಅದು ಅಕ್ರಮವಾಗಿ ನಿರ್ಮಾಣಗೊಳ್ಳುವ ಯೋಜನೆಯಾಗುತ್ತದೆ ಎಂದರು.
ಹೀಗಾಗಿ ಪರಿಸರಕ್ಕೆ, ವನ್ಯಜೀವಿಗಳಿಗೆ, ಸುತ್ತಮುತ್ತಲಿನ ಜನರಿಗೆ ದುಷ್ಪರಿಣಾಮ ಬೀರುವ ಯೋಜನೆಗಳ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ನಿಕಟಪೂರ್ವ ಅಧ್ಯಕ್ಷ ಹಾಗೂ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸೇರಿದಂತೆ ಹಲವರು
ಇದ್ದರು.
Discussion about this post