ಶಿವಮೊಗ್ಗ: ಜಿಲ್ಲೆಯ ಕೆರೆಗಳ ಸಂರಕ್ಷಣೆ ಕುರಿತಾಗಿ ಜಿಲ್ಲಾ ಸರೋವರ ಸಂರಕ್ಷಣಾ ಸಮಿತಿಯ ಬಗ್ಗೆ ಒಂದು ತಿಂಗಳ ಒಳಗಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಪ್ರಮುಖ ಕೆ.ವಿ. ವಸಂತ ಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿವಿಧ ಪರಿಸರ ಆಸಕ್ತ ಸಂಘಟನೆಗಳ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.5 ರಂದು ನಗರದಲ್ಲಿ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಆಗ್ರಹಿಸಿ ಜಾಥವನ್ನು ಅಂದು ಬೆಳಿಗ್ಗೆ 10.30ಕ್ಕೆ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥ ಹಮ್ಮಿಕೊಳ್ಳಲಾಗಿದೆ. ನಂತರ ಜಿಲ್ಲಾ ಸರೋವರ ಸಂರಕ್ಷಣಾ ಸಮಿತಿ ಅಧ್ಯಕ್ಷರು ಆದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಕೆರೆಗಳ ಬಗ್ಗೆ ಜಿಲ್ಲಾ ಸರೋವರ ಸಂರಕ್ಷಣಾ ಸಮಿತಿ ಒಂದು ತಿಂಗಳೊಳಗಾಗಿ ಶ್ವೇತಪತ್ರ ಹೊರಡಿಸಬೇಕು. ನಗರದ ಸುತ್ತಮುತ್ತಲಿರುವ ಎಲ್ಲ ಕೆರೆಗಳ ಮಾಹಿತಿ, ಒತ್ತುವರಿ , ಒತ್ತುವರಿ ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿರುವ ಬಗ್ಗೆ, ರಾಷ್ಟ್ರೀಯ ಹಸಿರು ಪೀಠ ಆದೇಶ ಅನುಷ್ಠಾನಕ್ಕೆ ತೆಗೆದುಕೊಂಡ ಕ್ರಮ, ಕೆರೆಗಳ ಅಭಿವೃದ್ದಿಗೆ ಇಲ್ಲಿಯವರೆಗೂ ತೆಗೆದುಕೊಂಡ ಕ್ರಮ ಹಾಗೂ ಸಮಿತಿ ನಡೆಸಿರುವ ಸಭೆ ಮುಂತಾದ ವಿಷಯಗಳ ಕುರಿತು ಸಮಗ್ರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
ನಗರ ಪ್ರದೇಶದಲ್ಲಿರುವ ಎಲ್ಲ ಕೆರೆಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ದಂಡೆ ನಿರ್ಮಿಸಿ, ದಡದಲ್ಲಿ ವಾಕಿಂಗ್ ಪಾತ್ ನಿರ್ಮಿಸಿ ಸುತ್ತಲೂ ಗಿಡ ಬೆಳೆಸಬೇಕು, ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ ಕಲ್ಪಿಸಬೇಕು, ಕೆರೆ ಒತ್ತುವರಿ ಮಾಡಿದವರ ವಿರುದ್ದ ಸರೋವರ ಸಂರಕ್ಷಣೆ ಮತ್ತು ಅಭಿವೃದ್ದಿ ಅಧಿನಿಯಮ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಹಸಿರು ಪೀಠದ ಆದೇಶದಂತೆ ಕೆರೆಗಳ ಸುತ್ತು 75 ಮೀಟರ್ ಬಫರ್ ಜೋನ್ ಗುರುತಿಸಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಸೋಮಿನಕೊಪ್ಪದ ಒಂದೇ ಕೆರೆ ಅಭಿವೃದ್ದಿಗಾಗಿ 10 ಕೋಟಿ ರೂ. ವಿನಿಯೋಗಿಸದೇ, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸುತ್ತಮುತ್ತಲಿನ ಹಲವು ಕೆರೆಗಳ ಅಭಿವೃದ್ದಿಗೆೆ ಮುಂದಾಗಬೇಕೆಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಎಸ್.ಬಿ. ಅಶೋಕ್ ಕುಮಾರ್, ಜನಾರ್ಧನ ಪೈ, ಪರಿಸರ ನಾಗರಾಜ್, ಬಾಲಸುಬ್ರಮಣ್ಯ, ಚಂದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.

















