ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಧಾರ್ಮಿಕ ಆಚರಣೆಗಳು ಭಾವೈಕ್ಯ ಸಾರುವ ಆಚರಣೆಗಳಾಗಿ ವಿವಿಧತೆಯಲ್ಲಿ ಏಕತೆಯ ಭಾವ ಬೀರುತ್ತ ಭಾರತೀಯ ಸಂಸ್ಕೃತಿಗಳ ಪ್ರತಿನಿಧಿತ್ವ ವಹಿಸುತ್ತ ಸಾಮಾಜಿಕ ಪ್ರಗತಿಗೆ ನಾಂದಿ ಹಾಡುವ ಆಚರಣೆಗಳಾಗಿ ಹೊರಹೊಮ್ಮಿ ಸಂಸ್ಕೃತಿಗಳ ಹೆಮ್ಮೆ ಎನಿಸುತ್ತಿವೆ. ಸಾಮಾಜಿಕ ಸಾಮರಸ್ಯ ಬಿಂಬಿಸುವ ಸತ್ಕಾರ್ಯಗಳ ಮೂಲಕ ಆಚರಣೆಗಳ ಮಹತ್ವವನ್ನು ಸಾರುವುದೇ ಮೂಲ ಉದ್ದೇಶ ಎಂಬ ಮಹತ್ವದ ಮಾತಿಗೆ ಸಾಕ್ಷಿಯಾಗಿ ಪ್ರತಿಯೊಂದು ಜನಾಂಗದ ವಿಶಿಷ್ಟ ಆಚರಣೆಗಳಂತೆ ಆರ್ಯ ವೈಶ್ಯ ಸಮಾಜದ ವಾಸವಿ ಜಯಂತಿ ಆಚರಣೆಯು ಮೇ 2 ರಂದು ಜರುಗಲಿದೆ.
ವಿಶ್ವದಾದ್ಯಂತ ಅಪ್ಪಳಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಪ್ರತಿ ವರ್ಷದಂತೆ ಈ ವರ್ಷದ ಆಚರಣೆಯಲ್ಲಿ ವಿಜೃಂಬಣೆ ಇರದೇ ತಮ್ಮ ತಮ ಮನೆಗಳಲ್ಲಿಯೇ ವಾಸವಿ ಜಯಂತಿಯನ್ನು ಆಚರಿಸಲು ಸಮಾಜ ಬಾಂಧವರು ಸ್ವಯಂಪ್ರೇರಿತರಾಗಿ ಸಿದ್ದರಾಗಿರುವುದು ಸರ್ಕಾರದ ನಿಯಮಾವಳಿಗೆ ಪೂರಕವಾಗಿದೆ. ಆದರೆ ಆಚರಣೆಯ ಭಾಗವಾಗಿ ನಡೆಯುತ್ತಿದ್ದ ಸಾಮಾಜಿಕ ಸದುದ್ದೇಶದ ಕಾರ್ಯಗಳು ಎಂದಿಗಿಂತ ಇಂದು ಹೆಚ್ಚಾಗಿ ನಡೆಯುತ್ತಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿವೆ.
ಶಿವಮೊಗ್ಗದ ವಾಸವಿ ಯುವಜನ ಸಂಘ, ಗಾಂಧಿ ಬಜಾರ್ ಮತ್ತು ವಾಸವಿ ಯುವಜನ ಸಂಘ(ಬಡಾವಣೆ) ಇವರ ಸಂಯುಕ್ತಾಶ್ರಯದಲ್ಲಿ ಕಳೆದ ಹದಿನಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ಈ ಬಾರಿಯೂ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸಾರ್ಥಕತೆ ಮೆರೆಯುತ್ತಿವೆ. ಲಾಕ್ ಡೌನ್ ನಂತಹ ಭಿನ್ನ ಪರಿಸ್ಥಿತಿಯಲ್ಲಿ ರಕ್ತದ ಅಭಾವ ಹೆಚ್ಚಾಗಿದ್ದು ಸ್ವಯಂ ಪ್ರೇರಿತ ರಕ್ತದಾನಿಗಳು ಹೊರಬರಲು ಹಿಂದೇಟು ಹಾಕುತ್ತಿರುವುದರ ಪರಿಣಾಮ, ರಕ್ತದ ಯೂನಿಟ್ ಗಳ ಸಂಗ್ರಹ ಪ್ರಮಾಣ ಅನಿರೀಕ್ಷಿತ ಪ್ರಮಾಣಕ್ಕೆ ಕುಸಿದು, ನಿತ್ಯ ರಕ್ತದ ಅವಲಂಬಿತರನ್ನು ಚಿಂತೆಗೀಡು ಮಾಡಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ವಾಸವಿ ಯುವಜನ ಸಂಘವು ವಾಸವಿ ಜಯಂತಿಯ ದಿನವಾದ ಮೇ 2 ರಿಂದ 9 ರವರೆಗೆ ರಕ್ತದಾನ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ವೇದಿಕೆ ಸೃಷ್ಟಿ ಮಾಡಿದೆ.
ಪ್ರತಿ ವರ್ಷ ಕೇವಲ ಒಂದು ದಿನಕ್ಕೆ ಸೀಮಿತವಾಗುತ್ತಿದ್ದ ಈ ರಕ್ತದಾನ ಶಿಬಿರವು ಕೊರೊನಾ ಪ್ರಯುಕ್ತ ಏಳು ದಿನಗಳ ಸಪ್ತಾಹಕ್ಕೆ ವಿಸ್ತೃತಗೊಂಡಿರುವುದು, ವಾಸವಿ ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಆರ್ಯವೈಶ್ಯರು ನೀಡುತ್ತಿರುವ ಕೊಡುಗೆಯಾಗಿದೆ. ಯುವಕರ ಈ ಮಹತ್ಕಾರ್ಯವನ್ನು ಮೆಚ್ಚಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಸಂಸ್ಥೆಯು ಈ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಸಮಾಜದ ಎಲ್ಲ ಸಂಸ್ಥೆಗಳೂ ಆಯೋಜಿಸಲು ಕರೆ ನೀಡಿರುವುದು ಶಿವಮೊಗ್ಗೆಯ ಯುವಕರಿಗೆ ಹೆಮ್ಮೆಯ ವಿಚಾರ. ರಾಜ್ಯಾದ್ಯಂತ 5000 ರಕ್ತದ ಯೂನಿಟ್ ಗಳು ಹಾಗೂ ಶಿವಮೊಗ್ಗ ನಗರದಿಂದ 100 ಕ್ಕೂ ಅಧಿಕ ಯೂನಿಟ್ ಗಳ ಗುರಿ ಹೊತ್ತು ಕೈಗೊಂಡಿರುವ ಈ ಮಹತ್ಕಾರ್ಯವು ಲಾಕ್ ಡೌನ್ ನಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಜೀವದಾನದಂತಹ ಕಾರ್ಯವೆನಿಸಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಸದೃಡ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಮಹಿಳೆಯರೂ ಕೂಡ ಅವಶ್ಯವಾಗಿ ರಕ್ತದಾನ ಮಾಡಬಹುದಾಗಿದ್ದು ಸ್ಥಳದಲ್ಲೇ ವೈದ್ಯರ ಸಲಹೆ ಪಡೆಯಬಹುದಾಗಿದೆ. ಈ ಮೂಲಕ ರಕ್ತದಾನ ಶ್ರೇಷ್ಠ ದಾನವೆಂದು ಸಾರುವ ಸಮಯ ಬಂದಿದೆ.
ಶಿವಮೊಗ್ಗ ನಗರದಲ್ಲಿ ವಿನಾಯಕ ನಗರದ ರೋಟರಿ ರಕ್ತನಿಧಿ ಸಂಸ್ಥೆಯು ಲಾಕ್ ಡೌನ್ ಸಮಯದಲ್ಲಿ ದೂರದಿಂದ ಬರುವ ದಾನಿಗಳಿಗೆ ಅಗತ್ಯ ಬಿದ್ದಲ್ಲಿ ವಾಹನ ವ್ಯವಸ್ಥೆಯನ್ನೂ ಕಲ್ಪಿಸಿದ್ದು ಸಾರ್ವಜನಿಕರೂ ಈ ಶ್ರೇಷ್ಠ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
ವಾಹನದ ವ್ಯವಸ್ಥೆ ಹಾಗೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಶ್ರೀನಾಗ್ (9844174143) ಹಾಗೂ ಬಾಲಾಜಿ (9886009942) ಇವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
Get in Touch With Us info@kalpa.news Whatsapp: 9481252093
Discussion about this post