ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಾತಿ ಗಣತಿ #Caste Census ಮಾಡಲೇ ಬೇಡಿ, ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮುಂದೂಡಿ ಎಂದು ರಾಷ್ಟ್ರ ಭಕ್ತರ ಬಳಗದಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಇಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇಡೀ ರಾಜ್ಯದ ಜನತೆಯ ವಿರೋಧದ ನಡುವೆಯೂ ಪೂರ್ವ ತಯಾರಿ ಇಲ್ಲದೇ ಮುಂದಾಲೋಚನೆ ಇಲ್ಲದೇ 7 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ರಾಜ್ಯದ ಜನಗಣತಿಯನ್ನು ಕೇವಲ 15 ದಿನಗಳಲ್ಲಿ ನಡೆಸಲು ಹೊರಟಿರುವುದು ಸಮಂಜಸವಲ್ಲ. ನಮ್ಮ ಅರ್ಧದಷ್ಟು ಜನಸಂಖ್ಯೆಯುಳ್ಳ ಪಕ್ಕದ ತೆಲಂಗಾಣದಲ್ಲಿ 65 ದಿನಗಳನ್ನು ತೆಗೆದುಕೊಂಡಿದ್ದು, ಒಬ್ಬ ವ್ಯಕ್ತಿಗೆ 60 ಪ್ರಶ್ನೆ ಕೇಳಿ 15 ದಿನದೊಳಗೆ ಸಮೀಕ್ಷೆ ನಡೆಸುವುದು ಅಸಾಧ್ಯವಾಗಿದೆ. ಅಲ್ಲದೇ ಈಗ ಹಿಂದೂಗಳಿಗೆ ಪವಿತ್ರ ನವರಾತ್ರಿ ಉತ್ಸವದ ಸಮಯವಾಗಿದ್ದು, ನಾಡದೇವಿಯ ದಸರಾ ಸಂಭ್ರಮ, ಶಾಲಾ ಕಾಲೇಜುಗಳಿಗೆ ರಜೆ ಇದೆ. ಈ ಸಮಯದಲ್ಲಿ ತಮ್ಮ ಮೂಲ ಸ್ಥಾನ ಬಿಟ್ಟು ಬೇರೆ ಊರುಗಳಿಗೆ ಹಬ್ಬ ಆಚರಣೆಗೆ ಮತ್ತು ಪ್ರವಾಸಿ ತಾಣಗಳಿಗೆ ಜನರು ತೆರಳುವುದರಿಂದ ನಿಖರ ಸಮೀಕ್ಷೆ ಸಾಧ್ಯವಿಲ್ಲ ಎಂದರು.
ಹಿಂದಿನ ಸಮೀಕ್ಷೆಯಲ್ಲಿ ಅಸಂವಿಧಾನಿಕವಾಗಿ ಹಲವು ಜಾತಿಗಳನ್ನು ಸೃಷ್ಟಿಸಿ ಹಿಂದೂ ಜಾತಿಗಳಿಗೆ ಕ್ರಿಶ್ಚಿಯನ್ ಧರ್ಮ ಸೇರಿಸಿ ಹಿಂದೂಗಳಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದ್ದೀರಿ. ಈಗ ಅಂತಹ 46 ಜಾತಿಗಳಲ್ಲಿ 33 ಜಾತಿಗಳನ್ನು ಕೈಬಿಟ್ಟಿದ್ದೀರಿ. 13 ಜಾತಿಗಳನ್ನು ಮುಂದುವರಿಸಿದ್ದೀರಿ. ಇದನ್ನು ಒಪ್ಪಲು ಸಾಧ್ಯವಿಲ್ಲ. ಮತಾಂತರಗೊAಡರೂ ತಮ್ಮ ಮೂಲ ಜಾತಿಯನ್ನು ಇತರೆ ಕಾಲಂನಲ್ಲಿ ನಮೂದಿಸಲು ಅವಕಾಶ ಕೊಟ್ಟಿರುವ ಆಯೋಗದ ನಡೆಯು ಯಾವುದೇ ಕಾರಣಕ್ಕೂ ಸ್ವೀಕಾರವಲ್ಲ ಎಂದರು.
ಇದು ನಿಸ್ಸಂಶಯವಾಗಿ ಹಿಂದೂ ಧರ್ಮವನ್ನು ಒಡೆಯುವ ಸಂಚಿನ ಭಾಗವಾಗಿದ್ದು, ಈ ಜಾತಿಗಣತಿಯನ್ನು ತಕ್ಷಣ ನಿಲ್ಲಿಸಬೇಕು. ಜಾತಿ ಗಣತಿಯಿಂದ ತಮ್ಮ ತಮ್ಮ ಸಮಾಜಕ್ಕಾಗುವ ಅನ್ಯಾಯ ಅರಿತು ಹಲವು ಜಾತಿ ಸಮುದಾಯಗಳ ಮಠಾಧೀಶರು ಮತ್ತು ಮುಖಂಡರು ಒಕ್ಕೊರಲಿನಿಂದ ಈಗಾಗಲೇ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಸಮೀಕ್ಷೆ ಅವೈಜ್ಞಾನಿಕ ಮತ್ತು ಅಸಂವಿಧಾನಿಕ ನಡೆ ಎಂದು ಖಂಡಿಸಿರುತ್ತಾರೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಲು ಸೂಚಿಸುವುದರ ಮೂಲಕ ಹಿಂದೂ ಧರ್ಮೀಯರಲ್ಲಿ ಒಗ್ಗಟ್ಟನ್ನು ಮೂಡಿಸಿದ್ದಾರೆ. ಅದಕ್ಕಾಗಿ ನಾನು ಮಠಾಧೀಶರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವುದಾಗಿ ಹೇಳಿದ್ದು, ರಾಜ್ಯಕ್ಕೆ ಜಾತಿ ಗಣತಿ ನಡೆಸುವ ಅಧಿಕಾರವೂ ಇಲ್ಲ. ಅವಶ್ಯಕತೆಯೂ ಇಲ್ಲ. ಸರ್ಕಾರದ ಸಚಿವರೇ ಈ ಸಮೀಕ್ಷೆಯ ವಿರುದ್ಧ ಸಿಡಿದೆದ್ದಿದ್ದಾರೆ. ಈ ಸಮೀಕ್ಷೆಯ ಪರಿಣಾಮ ರಾಜ್ಯ ಸರ್ಕಾರ ಪತನವಾಗುವ ಲಕ್ಷಣಗಳು ಕಾಣುವುದರಿಂದ ಮುಖ್ಯಮಂತ್ರಿಗಳು ಸಮೀಕ್ಷೆ ಮಾಡದಿರುವ ನಿರ್ಧಾರ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಸುವರ್ಣಾ ಶಂಕರ್, ಕೆ.ಇ. ಕಾಂತೇಶ್, ಇ. ವಿಶ್ವಾಸ್, ಜಾಧವ್, ಶ್ರೀಕಾಂತ್, ಬಾಲು, ಕುಬೇರಪ್ಪ, ರಾಜು ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post