ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಎಜಿ ಅಂಡ್ ಪಿ ಪ್ರಥಮ್ ಸಂಸ್ಥೆಯಿಂದ ಸಿಎನ್’ಜಿ ಮತ್ತು ಎಲ್’ಸಿಎನ್’ಜಿ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಗೌತಮ್ ಆನಂದ್ ಹೇಳಿದರು.
ಅವರು ಇಂದು ನಗರದ ರಾಯಲ್ ಆರ್ಕಿಡ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಭಾಗವಹಿಸಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಎಜಿ ಅಂಡ್ ಪಿ ಅನಿಲ ವಿತರಣೆಯ ಪ್ರಮುಖ ಕಂಪನಿಯಾಗಿದ್ದು, ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಯ ಭಾಗವಾಗಿ ಮೂಲ ಸೌಕರ್ಯ ನಿರ್ಮಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಗ್ರಾಹಕರಿಗೆ ಅನುಕೂಲವಾಗುವಂತೆ ನ್ಯಾಚುರಲ್ ಗ್ಯಾಸ್ ಸೌಲಭ್ಯ ನೀಡಲಾಗುವುದು. ವಾಹನಗಳಿಗೆ ಮಾತ್ರವಲ್ಲದೇ ಗೃಹಬಳಕೆಯ ಗ್ರಾಹಕರ ಅಡುಗೆ ಮನೆಗಳಿಗೆ ನೈಸರ್ಗಿಕ ಅನಿಲ ಪೂರೈಸುವ ಗುರಿ ಹೊಂದಿದ್ದು, ಮೈಸೂರು ಸೇರಿದಂತೆ ಕರ್ನಾಟಕದ ಅನೇಕ ಕಡೆಗಳಲ್ಲಿ ಈಗಾಗಲೇ ತನ್ನ ಕಾರ್ಯ ಆರಂಭ ಮಾಡಿದೆ. ಗೃಹ ಗ್ರಾಹಕರ ನೋಂದಣಿ ಸಹ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿ ಹೊಸ ಮಂಡ್ಲಿಯಲ್ಲಿ ಎಲ್’ಸಿಎನ್’ಜಿ ಘಟಕ ನಿರ್ಮಿಸಲಾಗುತ್ತಿದೆ. ಇದರ ಮೂಲಕ ಜಿಲ್ಲೆಯಲ್ಲಿ ನೈಸರ್ಗಿಕ ಅನಿಲಕ್ಕಿರುವ ಬೇಡಿಕೆ ಪೂರೈಸಲಾಗುವುದು ಎಂದರು.
ಸರ್ಕಾರದಿಂದ ಈಗಾಗಲೇ ಯೋಜನೆಗೆ ಅನುಮತಿ ಪಡೆಯಲಾಗಿದೆ. ಕೇವಲ ಸಾರಿಗೆ, ಗೃಹಬಳಕೆ ಮಾತ್ರವಲ್ಲದೇ ಕಾರ್ಖಾನೆಗಳು ಬಾಯ್ಲರ್’ಗಳಲ್ಲೂ ಕೂಡ ಈ ಗ್ಯಾಸ್ ವಿಸ್ತರಿಸಲಾಗುವುದು. ಇದು ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು.
ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಸಿಎನ್’ಜಿ ಅಳವಡಿಸಿರುವ ವಾಹನಗಳೇ ಸಿಗುತ್ತವೆ. ಆಕಸ್ಮಾತ್ ಅಂತಹ ವಾಹನಗಳು ಇಲ್ಲದಿದ್ದರೆ, ಸಿಎನ್’ಜಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ನೈಸರ್ಗಿಕ ಅನಿಲ ಪರಿಸರ ಪ್ರೇಮಿಯಾಗಿದೆ. ಆರ್ಥಿಕವಾಗಿ ಲಾಭವಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಗಿಂತ ಶೇ. 40 ರಷ್ಟು ಉಳಿತಾಯವಾಗುತ್ತದೆ ಎಂದರು.
Also read: ಗಮನಿಸಿ! ಮೇ 14ರಂದು ಗಾಡಿಕೊಪ್ಪ, ಆಲ್ಕೊಳ ಸರ್ಕಲ್ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ
ಟ್ಯಾಕ್ಸಿ, ಆಟೋ ಮತ್ತು ಖಾಸಗಿ ಕಾರ್ ಗಳ ಓಡಾಟಕ್ಕೆ ಅನುಕೂಲಕರವಾದ ಸಾರಿಗೆ ಇಂಧನ ಸಿಎನ್’ಜಿ ಗ್ಯಾಸ್ ಆಗಿದೆ ಎಂದರು.ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್ ಮತ್ತು ಡೀಸೆಲ್’ಗಿಂತ ಇದು ಹೆಚ್ಚು ಅಗ್ಗವಾಗಿದೆ. ಈಗಾಗಲೇ ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಇದರ ಬಳಕೆಯಾಗುತ್ತಿದ್ದು, ವಾಯುಮಾಲಿನ್ಯ ಸಂಪೂರ್ಣವಾಗಿ ಕಡಿಮೆಯಾಗಿದೆ. ಅಲ್ಲದೇ, ದೇಶದ ಭುವನೇಶ್ವರ್, ಭೂಪಾಲ್, ಮಂಡಿದೀಪ್, ಸೊಲ್ಲಾಪುರ ಮುಂತಾದ ಕಡೆಗಳಲ್ಲಿ ಸುರಕ್ಷಿತ ಇಂತಹ ಅನಿಲ ಘಟಕಗಳನ್ನು ನಾವು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಎಲ್’ಸಿಎನ್’ಜಿ ಸ್ಥಾವರ ಪ್ರಾರಂಭ ಮಾಡುತ್ತೇವೆ. ಆಗ ಪ್ರತಿ ಮನೆಗೂ ಗ್ಯಾಸ್ ನೀಡುವ ಯೋಜನೆ ನಮ್ಮದಾಗಿದೆ. ಈಗಾಗಲೇ ನೋಂದಣಿ ನಡೆಯುತ್ತಿದ್ದು, ಸುಮಾರು 8 ಸಾವಿರ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದು ಸಿಲಿಂಡರ್ ರೂಪದಲ್ಲಿ ಬರುವುದಿಲ್ಲ. ಪೈಪ್ ಮೂಲಕ ಬರುವುದರಿಂದ ಅಪಾಯದ ಪ್ರಮಾಣ ತುಂಬಾ ಕಡಿಮೆಯಾಗುತ್ತದೆ. ಇಂಧನ ವೆಚ್ಚ ಕೂಡ ಶೇಕಡ 50 ರಷ್ಟು ಕಡಿಮೆಯಾಗುತ್ತದೆ ಎಂದರು.
ಶಿವಮೊಗ್ಗದಲ್ಲಿ ಘಟಕ ಸ್ಥಾಪನೆಯಿಂದ ಸಾವಿರಾರು ಉದ್ಯೋಗಾವಕಾಶಗಳು ಕೂಡ ದೊರಕುತ್ತವೆ. ಪರಿಸರ ಉತ್ತಮವಾಗುತ್ತದೆ. ಮಾಲಿನ್ಯ ಕಡಿಮೆಯಾಗುತ್ತದೆ. ನಾಗರಿಕರ ಜೀವನಮಟ್ಟ ಸುಧಾರಿಸುತ್ತದೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಒಳ್ಳೆಯದನ್ನು ಮಾಡುವುದೇ ನಮ್ಮ ಉದ್ದೇಶವಾಗಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಹೊಸ ಸಿಎನ್’ಜಿ ಸ್ಟೇಷನ್ ಗಳನ್ನು ಸ್ಥಾಪಿಸಲಾಗಿದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ನಿತಿನ್ ಹುಯಿಲಗೋಳ, ಸಂತೋಷ್ ಕುಲಕರ್ಣಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post