ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಾಸನ ಭಾಗದಲ್ಲಿ ಹೇರಳವಾಗಿ ಅರಣ್ಯನಾಶವಾಗುತ್ತಿದ್ದು, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ರೈತ ಸಂಘ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಿದ ನಂತರ ನ್ಯಾಯಾಲಯವೇ ಮಧ್ಯ ಪ್ರವೇಶಿಸಿ ಸ್ಥಳದಲ್ಲಿ ಸುತ್ತಮುತ್ತಲೂ ಕಾರ್ಯನಿರ್ವಹಿಸುತ್ತಿದ್ದ ಸುಮಾರು 45ಕ್ಕೂ ಹೆಚ್ಚು ಅನಧೀಕೃತ ಸಾಮಿಲ್‍ಗಳು ಮತ್ತು ವುಡ್ ಇಂಡಸ್ಟ್ರೀಗಳನ್ನು ಮುಚ್ಚಲು ಆದೇಶ ನೀಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಭಾಗದಲ್ಲಿ 24 ಜಲವಿದ್ಯುತ್ ಯೋಜನೆಗೆ ಸರ್ಕಾರ ಪರವಾನಿಗೆ ನೀಡಿತ್ತು. ನೇತ್ರಾವತಿ ನದಿಗೆ ಸೇರುವ ಅನೇಕ ಉಪನದಿಗಳಿಗೆ ತಡೆಯೊಡ್ಡಿ ಸುರಂಗದ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆಗಳಿಗೆ ಸರ್ಕಾರ ಕೈಹಾಕಿತ್ತು. ಇದರಿಂದ ಸಾವಿರಾರು ಮರಗಳು ದಟ್ಟ ಅರಣ್ಯದಲ್ಲಿ ನಾಶವಾಗುತ್ತಿತ್ತು. ಮತ್ತು ಕಾಡುಪ್ರಾಣಿಗಳು ನಾಡಿಗೆ ದಾಳಿ ಇಟ್ಟಿದ್ದವು. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದಾಗ ತಕ್ಷಣ ನ್ಯಾಯಾಲಯ ಈ ಯೋಜನೆಗಳನ್ನು ನಿಲ್ಲಿಸಲು ಆದೇಶ ನೀಡಿದೆ.
ಸಾಮಾನ್ಯ ರೈತರು ತಮ್ಮ ಮನೆ ಅಂಗಳದಲ್ಲಿ ಬೆಳೆಸಿದ ಮರಗಳನ್ನು ಕಡಿಯಲು ನೂರಾರು ವಿಘ್ನಗಳನ್ನು ಒಡ್ಡುವ ಸಬೂಬು ಹೇಳುವ ಅರಣ್ಯ ಇಲಾಖೆ ಸಕಲೇಶಪುರ, ಹಾಸನ ಅರಣ್ಯ ಭಾಗದಲ್ಲಿ ಮರಗಳ್ಳರು ಲೂಟಿ ಹೊಡೆದರೂ ಕಣ್ಣುಮುಚ್ಚಿ ಕುಳಿತಿದೆ. ಕರ್ನಾಟಕದಲ್ಲಿ ಪ್ರತಿನಿತ್ಯ 1 ಸಾವಿರ ಲೋಡ್ ಮರಗಳ ಕಳ್ಳಸಾಗಣೆ ಆಗುತ್ತಿದೆ. ಈ ಬಗ್ಗೆ ಅರಣ್ಯ ಸಚಿವ ಖಂಡ್ರೆ ಅವರ ಗಮನಕ್ಕೆ ತಂದರೂ ಕೂಡ ಅವರು ಯಾವುದೇ ಕ್ರ ಮ ಕೈಗೊಳ್ಳಲಿಲ್ಲ ಎಂದರು.
ರಾಜ್ಯದಲ್ಲಿ 670ಕ್ಕೂ ಹೆಚ್ಚು ವುಡ್ ಇಂಡಸ್ಟ್ರೀಗಳು ನಡೆಯುತ್ತಾ ಇದ್ದು, ದೊಡ್ಡಮಟ್ಟದಲ್ಲಿ ಕೂಡ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಬಹುತೇಕ ಅನಧೀಕೃತವಾಗಿ ಪರವಾನಗಿ ಪಡೆಯದೇ ಕೆಲಸ ಮಾಡುತ್ತಿವೆ. ಲಕ್ಷಾಂತರ ಮರಗಳು ಖಾಲಿಯಾಗಿದೆ ಎಂದರು.
ಈ ಬಗ್ಗೆ ನಾವು ಮತ್ತೊಮ್ಮೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಿದ್ದೇವೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ. ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ನೀಲಿಗಿರಿ ಮುಕ್ತ ಜಿಲ್ಲೆಗಳು ಎಂದು ಆದೇಶ ಹೊರಡಿಸಿದ್ದರು. ಆದರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹರಿಹರ ಪಾಲಿಫೈಬರ್ ಸಂಸ್ಥೆಗೆ ನೀಡಲು ನೀಲಗಿರಿ ಬೆಳೆಸುತ್ತಿದ್ದಾರೆ. ರಾಜ್ಯದ ಹಲವು ದಟ್ಟ ಅರಣ್ಯಗಳ ಮಧ್ಯದಲ್ಲಿ ಕೂಡ ಹಿರಿಯ ಅಧಿಕಾರಿಗಳ ಆದೇಶದಂತೆ ನೀಲಗಿರಿ ಬೆಳೆಸುತ್ತಿದ್ದಾರೆ. ಇದಕ್ಕಾಗಿ ದೊಡ್ಡಮಟ್ಟದಲ್ಲಿ ಹಣದ ವ್ಯವಹಾರ ಅಧಿಕಾರಿಗಳ ಮಧ್ಯೆ ನಡೆದಿದೆ ಎಂದು ಆರೋಪಿಸಿದರು.
ಇದೊಂದು ದಂದೆಯಾಗಿ ಪರಿಗಣಿಸಿದ್ದಾರೆ. ನ್ಯಾಯಾಲಯ ಕೂಡಲೇ ಸರ್ಕಾರದಿಂದ ವರದಿ ತರಿಸಿಕೊಂಡು ಆದೇಶ ನೀಡಬೇಕಾಗಿದೆ. ಅರಣ್ಯ ಉಳಿಸುವ ಕನಿಷ್ಠ ಕಳಕಳಿ ಕೂಡ ಸರ್ಕಾರಕ್ಕಿಲ್ಲ. ಹಲವಾರು ವರ್ಷಗಳಿಂದ ಅರಣ್ಯದ ಗಡಿಭಾಗದಲ್ಲಿ ಹೊಟ್ಟೆಪಾಡಿಗಾಗಿ ಬಗರ್ ಹುಕುಂ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಿ ಅರಣ್ಯ ನಾಶಕ್ಕೆ ಅವರೇ ಕಾರಣರು ಎಂದು ಹೇಳುವ ಅಧಿಕಾರಿಗಳು ಮರ ಕಡಿಯಲು ಮತ್ತು ಸಾಗಾಟಕ್ಕೆ ಅನಧೀಕೃತವಾಗಿ ಒಪ್ಪಿಗೆ ನೀಡುತ್ತಿರುವುದು ದುರದೃಷ್ಟಕರ ಎಂದರು.
ಸಂಘದ ವತಿಯಿಂದ ರಾಜ್ಯ ರೈತಸಂಘದ ಸಂಸ್ಥಾಪಕರಾದ ಹೆಚ್.ಎಸ್. ರುದ್ರಪ್ಪನವರ ಸವಿನೆನಪಿನ ಕಾರ್ಯಕ್ರಮ ಆ.19ರಂದು ಬೆಳಿಗ್ಗೆ 11-30ಕ್ಕೆ ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೋಡಿಹಳ್ಳಿ ಚಂದ್ರಶೇಖರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವರಾದ ಸಿ.ಎಂ. ಇಬ್ರಾಹಿಂ, ಪ್ರೊ. ಶರತ್‍ಅನಂತಮೂರ್ತಿ, ಮಾರಸಂದ್ರ ಮುನಿಯಪ್ಪ, ಎಂ. ಮೋಹನ್‍ರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಗೌಡ, ಚಂದ್ರಶೇಖರ ಜಮಖಂಡಿ, ಅರುಣ್‍ಕುಮಾರ್, ಆರ್. ಮಂಜುನಾಥ್, ರವಿ, ಸುರೇಶ್ ನಾಯ್ಕ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post