ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶ-ವಿದೇಶಗಳಿಗೂ ಹೋಳಿಗೆ, ಮಲೆನಾಡಿನ ತಿಂಡಿ ತಿನಿಸು ಕಳುಹಿಸುತ್ತಿದ್ದ ಪ್ರಖ್ಯಾತ ಹೋಳಿಗೆ ಗೌರಮ್ಮ(88) #HoligeGouramma ವಿಧಿವಶರಾಗಿದ್ದಾರೆ.
ನಗರದ ದೊಡ್ಡ ಬ್ರಾಹ್ಮಣರ ಬೀದಿ ನಿವಾಸಿ ಹಾಗೂ ಹೋಳಿಗೆ #Holige ಮಾಡುವುದರಲ್ಲಿ ನಿಷ್ಣಾತರಾಗಿದ್ದ ಗೌರಮ್ಮ ಅವರು ಕಳೆದ ಕೆಲವು ತಿಂಗಳುಗಳಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಪಡೆಯುತ್ತಿದ್ದರೂ, ಅದು ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಹೋಳಿಗೆ ಗೌರಮ್ಮನವರು ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.
ಗೌರಮ್ಮನವರ ಮೃತದೇಹದ ಅಂತ್ಯಸಂಸ್ಕಾರದ ನಂತರ, ನಗರದ ರೋಟರಿ ಚಿತಾಗಾರದಲ್ಲಿ ಅಂತಿಮಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಗೌರಮ್ಮನವರ ನಿಧನಕ್ಕೆ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ. ವೆಂಕಟೇಶರಾವ್, ಕಾರ್ಯದರ್ಶಿ ಸಂತೋಷ ಕುಮಾರ್, ಪತ್ರಕರ್ತ ಎಚ್.ಸಿ. ಮುರುಳೀಧರ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ತಮ್ಮ ಚಿಕ್ಕ ವಯಸ್ಸಿನಿಂದಲೇ ಕಡು ಬಡತನವನ್ನು ಅನುಭವಿಸಿದ್ದ ಅವರು, ಮದುವೆಯಾದ ನಂತರ ಹೋಳಿಗೆ ಮಾಡುವುದನ್ನು ಕಲಿತು, ಕಾಯಿ ಹೋಳಿಗೆ, ಬೇಳೆ ಹೋಳಿಗೆ ಸೇರಿದಂತೆ ಹಲವು ವಿಧದ ಹೋಳಿಗೆಗಳನ್ನು ತಯಾರಿಸಿ ರಿಯಾಯಿತಿ ದರದಲ್ಲಿ ಮಾರುತ್ತಿದ್ದರು.
ಕೇವಲ ಹೋಳಿಗೆಗಳ ತಯಾರಿಕೆ ಮಾತ್ರವಲ್ಲದೇ, ಬಾಣಂತಿಯರಿಗೆ ವಿಶೇಷವಾದ ಅಂಟಿನುಂಡೆ, ಮದುವೆಗೆ ಅವಲಕ್ಕಿ ಉಂಡೆ, ಚಕ್ಕುಲಿ, ರವೆ ಉಂಡೆ, ಬೇಸಿನ್ ಉಂಡೆ ತಯಾರಿಸುತ್ತಿದ್ದರು.
ಪ್ರಮುಖವಾಗಿ, ಇವರು ತಯಾರಿಸುತ್ತಿದ್ದ ಹೋಳಿಗೆ ಹಾಗೂ ತಿಂಡಿ-ತಿನಿಸುಗಳು ದೇಶದ ವಿವಿಧ ರಾಜ್ಯ ಹಾಗೂ ವಿದೇಶಗಳಿಗೂ ಸಹ ಹೋಗುತ್ತಿದ್ದವು. ಇವರ ಕೈರುಚಿಗೆ ಮನಸೋತ ವಿದೇಶದಲ್ಲಿರುವ ಬಹಳಷ್ಟು ಬಹಳಷ್ಟು ಮಂದಿ ಶಿವಮೊಗ್ಗದಿಂದ ಹೋಳಿಗೆಯನ್ನು ತರಿಸಿಕೊಳ್ಳುತ್ತಿದ್ದರು.
ಗೌರಮ್ಮನವರ ಈ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶಿವಮೊಗ್ಗ ಮಹಾನಗರಪಾಲಿಕೆ, ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಸಂಘ ಸೇರಿದಂತೆ ನಗರದ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post