ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಸ್. ಬಂಗಾರಪ್ಪ #S Bangarappa ಫೌಂಡೇಷನ್, ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 93ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಅ. 26ರಂದು ಸೊರಬದ ಬಂಗಾರಧಾಮದಲ್ಲಿ ಬೆಳಗಿನಿಂದ ಸಂಜೆಯವರೆಗೆ ಆಯೋಜಿಸಲಾಗಿದೆ ಎಂದು ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಂಗಾರಪ್ಪನವರು ಸಮಾಜವಾದಿ ಚಿಂತಕರಾಗಿದ್ದರು. ಅಭಿವೃದ್ಧಿಯ ಹರಿಕಾರರಾಗಿದ್ದರು. ಬಡವರ ಬಂಧುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಉಳಿದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರೊಂದು ನಕ್ಷತ್ರವಾಗಿದ್ದಾರೆ. ಇಂತಹ ಬಂಗಾರಪ್ಪನವರ ಜನ್ಮ ದಿನೋತ್ಸವವನ್ನು ನಮನ- ಚಿಂತನ- ಸನ್ಮಾನದ ಮೂಲಕ ಆಯೋಜಿಸಲಾಗಿದೆ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 5 ಗಂಟೆಗೆ ಬಂಗಾರಧಾಮದಲ್ಲಿ ನಡೆಯಲಿದೆ. ಸಚಿವ ಕೆ.ಹೆಚ್. ಮುನಿಯಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸಚಿವ ಸಂತೋಷ್ ಲಾಡ್, ಶಾಸಕ ಬೇಳೂರು ಗೋಪಾಲಕೃಷ್ಣ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ ಕುಮಾರ್, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ. ನಾಗರಾಜ್ ಮೂರ್ತಿ. ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯಕ್ ಉಪಸ್ಥಿತರಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಚಿವ ಎಸ್. ಮಧು ಬಂಗಾರಪ್ಪ ವಹಿಸಲಿದ್ದಾರೆ ಎಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್.ಎಲ್. ಪುಷ್ಪಾ, ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅವರು ಉಪನ್ಯಾಸ ನೀಡುವರು. ವಿಚಾರ ಸಂಕಿರಣದ ಉದ್ಘಾಟನೆಯನ್ನು ಪ್ರಸಿದ್ಧ ಕವಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅವರು ನೆರವೇರಿಸಲಿದ್ದು, ಸಾಹಿತಿ ಡಾ. ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸುವರು ಎಂದರು.
ನಂತರ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಬಂಗಾರಪ್ಪನವರ ಅಭಿಮಾನಿಗಳು, ಹಿತೈಷಿಗಳು ಆಗಮಿಸಲಿದ್ದಾರೆ. ಸಾರ್ವಜನಿಕರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಚಾರ ವೇದಿಕೆಯ ಪ್ರಮುಖರಾದ ಶಮಂತ್, ಆದರ್ಶ ಹುಂಚದಕಟ್ಟೆ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post