ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಾನ್ಯತೆ (ಅಕ್ರಿಡೇಶನ್ ಕಾರ್ಡ್) ಕಾರ್ಡ್ ಹೊಂದಿರುವ ಪತ್ರಕರ್ತರಿಗೆ ಘೋಷಣೆಯಾಗಿರುವ ಉಚಿತ ಆರೋಗ್ಯ ಸೇವೆಗಳ ಸೌಲಭ್ಯವನ್ನು ಪತ್ರಿಕಾ ಕಚೇರಿ ಸಿಬ್ಬಂದಿಗಳು, ತಾಲೂಕು ಮಟ್ಟದ ಪತ್ರಕರ್ತರು ಸೇರಿದಂತೆ ಪತ್ರಿಕಾ ರಂಗದ ಎಲ್ಲಾ ವೃತ್ತಿಬಾಂಧವರಿಗೂ ವಿಸ್ತರಿಸುವಂತೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಾಯಿಸಿದೆ.
ವಿಶ್ವ ಪತ್ರಿಕಾ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿಗಳು ಇಂದು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ಆನ್‌ಲೈನ್ ವೀಡಿಯೋ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಕೋವಿಡ್ ಸೋಂಕಿನಿಂದಾಗಿ ಹಲವು ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಎಲ್ಲರಿಗೂ ಉಚಿತ ಆರೋಗ್ಯ ಕಾರ್ಡ್ ನೀಡಬೇಕೆಂದು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಸಂದರ್ಭದಲ್ಲಿ ಕೊರೋನಾದಿಂದ ಮೃತಪಟ್ಟ ಪತ್ರಕರ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿತು.
ಅಲ್ಲದೆ ಕೋವಿಡ್ ಹರಡದಂತೆ ನಿಯಂತ್ರಿಸಲು ವಿಧಿಸಿದ್ದ ಲಾಕ್‌ಡೌನ್‌ನಿಂದಾಗಿ ಪ್ರಾದೇಶಿಕ ಹಾಗೂ ಸ್ಥಳೀಯ ಪತ್ರಿಕೆಗಳಿಗೆ ಖಾಸಗಿ ಜಾಹೀರಾತುಗಳಿಂದ ಬರುತ್ತಿದ್ದ ಲಾಭದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದೇ ಸಂದರ್ಭದಲ್ಲಿ ಏರುತ್ತಿರುವ ನ್ಯೂಸ್ ಪ್ರಿಂಟ್ ದರ ಹಾಗೂ ಇತರೆ ಮುದ್ರಣ ವೆಚ್ಚಗಳು ಪತ್ರಿಕೆಗಳನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಕೋವಿಡ್ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ರಾಜ್ಯ ಸರ್ಕಾರ ರಾಜ್ಯಮಟ್ಟದ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡಿದಂತೆ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೂ ಜಾಹೀರಾತು ನೀಡಬೇಕೆಂದು ಸಂಘ ಆಗ್ರಹಿಸಿತು.
ಈ ಮನವಿಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ರವಿಕುಮಾರ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post