ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಭಾನುವಾರ ಆನ್‌ಲೈನ್ ಮೂಲಕ ಈ ಸಾಲಿನ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ನಂತರ ಮುಂದೇನು? ಶಿಕ್ಷಣ ತಜ್ಞರಿಂದ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಣ ತಜ್ಞೆ ಸೀತಾಲಕ್ಷ್ಮೀ, ಸ್ವಯಂ ಶಿಸ್ತಿನ ಅಧ್ಯಯನ ಎಂಬುದು ಸದಾ ಮಕ್ಕಳಲ್ಲಿ ಕಡಿಮೆಯಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕಾಲೇಜುಗಳು ನಡೆಸುವ ಕಿರು ಮತ್ತು ವಾರ್ಷಿಕ ಪರೀಕ್ಷೆಗಳು ವಿದ್ಯಾರ್ಥಿಗಳ ಅಧ್ಯಯನಶೀಲತೆ ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಆದರೆ ಸಂದರ್ಭದ ಅನಿವಾರ್ಯತೆಗೆ ಸಿಲುಕಿ ಇದೇ ಮೊದಲ ಬಾರಿಗೆ ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಮಕ್ಕಳು ಗುರುಗಳ ನಡುವೆ ಬಾಂಧವ್ಯ ಬೆಳೆಯಲು ಸಾಧ್ಯವಾಗಲಿಲ್ಲ. ಆದರೆ ವಿದ್ಯಾರ್ಥಿಗಳು, ಪೋಷಕರು ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ. ಪಿಯುಸಿ ನಂತರ ಹಲವು ಶೈಕ್ಷಣಿಕ ವಿಷಯಗಳ ಜೊತೆಗೆ ವಾಸ್ತವತೆಯ ಜ್ಞಾನ ಪಡೆಯಲು ಮುಕ್ತ ಅವಕಾಶವಿದೆ. ಒಂದೇ ಕೋರ್ಸ್ ಕುರಿತು ಒಲವು ಬೇಡ. ವಿದ್ಯಾರ್ಥಿಗಳಲ್ಲಿರುವ ಆಸಕ್ತಿ, ಶೈಕ್ಷಣಿಕ ನೈಪುಣ್ಯತೆಯ ಆಧಾರದ ಮೇಲೆ ಕೋರ್ಸ್‌ಗಳ ಆಯ್ಕೆ ನಡೆಯಲಿ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅಧ್ಯಯನ ನಡೆಸಲು ಉತ್ತೇಜನ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು.
ಶಿಕ್ಷಣ ತಜ್ಞ ಡಾ. ಎಸ್.ಎನ್. ಜಗದೀಶ ಮಾತನಾಡಿ, ಎಲ್ಲರಿಗೂ ಸಾಧ್ಯವಾಗಬಲ್ಲ ಅನೇಕ ಕೋರ್ಸ್‌ಗಳು ಲಭ್ಯವಿದೆ. ಒಂದು ವಿಷಯಕ್ಕೆ ಸಿಮಿತವಾಗದೆ ಮುಕ್ತವಾಗಿ ಅಧ್ಯಯನ ನಡೆಸಲು ಭಾರತ ಸರ್ಕಾರದ ಎನ್‌ಪಿಟಿಎಲ್, ಸ್ವಯಂ ನಂತಹ ಅನೇಕ ವೇದಿಕೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಅನೇಕ ಗೊಂದಲಗಳಿಗೆ ಒಳಗಾಗದೆ ನಮ್ಮ ಆಸಕ್ತಿ, ನೈಪುಣ್ಯತೆಯ ವಿಮರ್ಶೆಗಳು ಅವಶ್ಯಕವಾಗಿದ್ದು, ಸಿಇಟಿ, ಕಾಮೆಡ್-ಕೆ ಪರೀಕ್ಷೆಗಳನ್ನು ಬರೆಯುವುದರ ಮೂಲಕ ಅಂತಹ ಸ್ವಯಂ ವಿಮರ್ಶೆ ಸಾಧ್ಯವಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಪಿಯುಸಿ ತೇರ್ಗಡೆ ನಂತರ ಮುಂದೇನು ಎಂಬ ಹಲವು ಗೊಂದಲಗಳು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮೂಡುವುದು ಸಹಜ. ಕೋವಿಡ್ ಆತಂಕದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜ್ಞಾನ ವಿಸ್ತಾರಗೊಳ್ಳಲು ಹಾಗೂ ಹಲವು ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಇಂದಿನ ಈ ಕಾರ್ಯಕ್ರಮ ಸಂಘಟಿಸಿದ್ದೇವೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್. ಅಶ್ವಥ ನಾರಾಯಣಶೆಟ್ಟಿ ಮಾತನಾಡಿ, ಪ್ರಪಂಚದ ಹಲವು ದೇಶಗಳಲ್ಲಿ ಭಾರತೀಯರು ಪ್ರಮುಖ ಸ್ಥಾನ ಪಡೆದಿರುವುದು ಸಂತೋಷದ ವಿಚಾರ. ಕೋರ್ಸ್‌ಗಳ ಆಯ್ಕೆಯಲ್ಲಿ ಇನ್ನಿತರರ ಮಾತುಗಳಿಗೆ ಕಿವಿಗೊಡದೆ ಸ್ಪಷ್ಟತೆಯಿರುವ ನಿಮ್ಮ ಇಷ್ಟದ ಕೋರ್ಸ್‌ಗಳನ್ನು ಆಯ್ಕೆ ಮಾಡುಕೊಳ್ಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವರಾದ ಪ್ರೋ.ಹೂವಯ್ಯ ಗೌಡ, ಶಿಕ್ಷಣ ತಜ್ಞರಾದ ಪ್ರೋ. ಆರ್.ಕೆ. ಬಾಳಿಗ, ನ್ಯಾಷನಲ್ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್ ಶೆಟ್ಟಿ, ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ಮಂಜುನಾಥ, ಎಂಬಿಎ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಜಿ. ಕೃಷ್ಣಮೂರ್ತಿ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಎನ್‌ಇಎಸ್ ಪಿಆರ್‌ಒ ಸಿ.ಎಂ. ನೃಪತುಂಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್, ಫಾರ್ಮಸಿ, ಡಿಪ್ಲೊಮಾ, ನರ್ಸಿಂಗ್, ಮೆಡಿಕಲ್ ಕೋರ್ಸ್‌ಗಳ ಕುರಿತು ಹಾಗೂ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಏಳು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಮುದ್ರಿತ ಪ್ರಸಾರ ಯುಟ್ಯೂಬ್ ಲಿಂಕ್ hಣಣhttps://youtu.be/F9dOIfKeHc0 ನಲ್ಲಿ ಲಭ್ಯವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post