ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನನಗೆ ಪಕ್ಷ ಟಿಕೆಟ್ ಕೊಟ್ಟೇ ಕೊಡುತ್ತದೆ. ಆ ಅರ್ಹತೆಯೂ ನನಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಬಾರಿ ನಾನು ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ. ಆ ಅರ್ಹತೆಯೂ ನನಗಿದೆ. ಸಾವಱಜನಿಕ ಬದುಕಿನಲ್ಲಿ ಸವಾಲಿನ ಮತ್ತು ಹೋರಾಟದ ಮಾಡಿಕೊಂಡೇ ಬಂದ ನನಗೆ ಎಲ್ಲಿಯೂ ಸುರಕ್ಷಿತವಾಗಿ ಗೆದ್ದಿಲ್ಲ. ಅದರ ಬದಲು ಚುನಾವಣೆಯನ್ನು ಎದುರಿಸಿ ಗೆದ್ದಿದ್ದೇನೆ ಎಂದರು.
ನನಗೆ ಟಿಕೆಟ್ ಬೇಕು ಎಂದು ಕೇಳಿದ್ದಕ್ಕೆ, ನನ್ನ ಅಭಿಮಾನಿಗಳು ಫ್ಲೆಕ್ಸ್ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಟೀಕೆ ಆರಂಭವಾಗಿವೆ. ಅದರಲ್ಲೂ ನಿತ್ಯ ಸುಮಂಗಲಿ ಎಂಬ ಪದ ಪ್ರಯೋಗಿಸಲಾಗಿದೆ. ಇದು ಯಾರು ಮಾಡಿದ್ದಾರೆ, ಏಕೆ ಮಾಡಿದ್ದಾರೆ ಎಂದು ನನಗೆ ಗೊತ್ತು. ಟೀಕಾಕಾರರಿಗೆ ನಾನು ಉತ್ತರ ಕೊಡಬೇಕಾದ ಅಗತ್ಯವಿಲ್ಲ. ಈಶ್ವರಪ್ಪನವರು ತನ್ನ ಮಗನಿಗೆ ಕೇಳಿದಾಗ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೆ. ನಾನೇನು ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ. ಇಂತಹ ಕೆಳಮಟ್ಟದ ಪದ ಬಳಕೆ ಸರಿಯಲ್ಲ ಎಂದರು.
ಫ್ಲೆಕ್ಸ್ ನಿರೀಕ್ಷೆಗೂ ಮೀರಿ ಗಮನಸೆಳೆದಿದೆ. ಫ್ಲೆಕ್ಸ್ ನಲ್ಲಿ ಶಾಂತಿ ಸೌಹಾರ್ದತೆ ಬೇಕು ಎಂಬ ಪದವೂ ಸಹ ಇರುವುದರಿಂದ ಸಾರ್ವಜನಿಕರು ಇದನ್ನು ಸ್ವಾಗತಿಸಿದ್ದಾರೆ. ಕೆಲವರು ಟೀಕೆಗಳನ್ನು ಸಹ ಮಾಡಿದ್ದಾರೆ. ಅಂತಹವರಿಗೆ ಶಿವಮೊಗ್ಗದಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ. ಪ್ರಧಾನಿ ಮೋದಿ ಅವರ ಉದ್ದೇಶವೂ ಶಾಂತಿಯೇ ಆಗಿದೆ. ವಿಶ್ವಮಾನವ ಪ್ರಜ್ಞೆಯನ್ನು ಮೂಡಿಸುವುದೇ ತಪ್ಪೇ? ಇದಕ್ಕಾಗಿ ಏನೆಲ್ಲಾ ಅರ್ಥಗಳಿವೆ ಎಂದ ಅವರು, ಬಿಜೆಪಿ ಕಾರ್ಯಕರ್ತರಾಗಿ ಮೋದಿ ಅವರ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಷ್ಟೇ ಎಂದು ಪರೋಕ್ಷವಾಗಿ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಕೆಟ್ ಕೇಳುವ ಅರ್ಹತೆ ನನಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾನು ಹೋರಾಟ ಮಾಡಿಕೊಂಡು ಬಂದವನು. ಅದಕ್ಕಾಗಿ ಜೈಲು ವಾಸ ಅನುಭವಿಸಿದವನು. ಹೋರಾಟಕ್ಕಾಗಿ ಜೈಲು ವಾಸ ಅನುಭವಿಸಿದ ರಾಜಕಾರಣಿಗಳು ತುಂಬಾ ವಿರಳ. ಪಕ್ಷ ನನಗೆ ವಿವಿಧ ಹುದ್ದೆಗಳನ್ನು ಕೊಟ್ಟಿದೆ ಎಂಬುದು ನಿಜ. ಹಾಗೆಯೇ ನಾನು ಕೂಡ ಅಧಿಕಾರದ ಅವಧಿಯಲ್ಲಿ ಸಾಕಷ್ಟು ನೆನಪಿಟ್ಟುಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಮಾನ ನಿಲ್ದಾಣ, ರಸ್ತೆಗಳು, ಕಾರ್ಮಿಕರ ಪರ ಹೋರಾಟ ಇವೆಲ್ಲವೂ ನನ್ನ ಕೊಡುಗೆಯೇ ಆಗಿದೆ. ಸದನದಲ್ಲಿ ಒಂಟಿ ಕಾಲಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಪ್ರಥಮ ಬಾರಿಗೆ ಶಾಸಕನಾಗಿದ್ದಾಗ ಒಂದೇ ವರ್ಷದಲ್ಲಿ ಅತ್ಯುತ್ತಮ ಸಂಸದೀಯ ಪಟು ಎಂಬ ಗೌರವವೂ ಸಿಕ್ಕಿದೆ ಎಂದರು.
Also read: ರಾಹುಲ್ ಗಾಂಧಿ ದೋಷಿ! ಸೂರತ್ ಕೋರ್ಟ್ ಮಹತ್ವದ ತೀರ್ಪು: ಕಾರಣವೇನು?
ಈ ಎಲ್ಲಾ ಅರ್ಹತೆಗಳು ನನಗಿರುವುದರಿಂದಲೇ ನಾನು ಟಿಕೆಟ್ ಕೇಳಿದ್ದೇನೆ. ವಿಧಾನ ಪರಿಷತ್ ನಿಂದ ನಾನು ಸಚಿವನಾಗುವುದು ಬೇಡ. ವಿಧಾನಸಭೆಗೆ ನಾನು ಪ್ರವೇಶ ಮಾಡಬೇಕು. ಬೇಕಾದರೆ ಕೆ.ಎಸ್. ಈಶ್ವರಪ್ಪ ಅವರನ್ನೇ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿ. ನನ್ನ ಹಾಗೆಯೇ ಅವರಿಗೂ 32 ವರ್ಷಗಳಿಂದ ಬಿಜೆಪಿ ದೊಡ್ಡ ಹುದ್ದೆಗಳನ್ನು ನೀಡಿದೆ. ಸೋತಾಗ ನಿಗಮ ಮಂಡಳಿಗಳಿಗೆ ನೇಮಿಸಿದೆ. ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈಗ ಅವರು ತಮ್ಮ ಮಗನಿಗೆ ಟಿಕೆಟ್ ಕೇಳುತ್ತಾರೆ ಎಂದು ತಿಳಿದು ಬಂದಿದೆ. ನಾನು ನನ್ನ ಮಗನಿಗೆ ಟಿಕೆಟ್ ಕೇಳುತ್ತಿಲ್ಲ. ನನಗೇ ಕೊಡಿ ಎಂದು ಕೇಳುತ್ತಿದ್ದೇನೆ ಎಂದರು.
ಬಿಜೆಪಿ ಟಿಕೆಟ್ ನೀಡದಿದ್ದರೆ ನಿಮ್ಮ ಮುಂದಿನ ನಡೆ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನೀಡದಿದ್ದರೆ ಎಂಬ ಮಾತೇ ಬರುವುದಿಲ್ಲ. ಪಕ್ಷ ಕೊಟ್ಟೇ ಕೊಡುತ್ತದೆ. ಅಷ್ಟಕ್ಕೂ ಕೊಡದಿದ್ದರೆ ನಿಮ್ಮಂತಹವರ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳುವೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post