ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ 2020-21ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದಕ್ಕಾಗಿ ಅಧಿಕಾರಿ/ ಸಿಬ್ಬಂದಿಗಳು / ಕಾಯಕ ಬಂಧು/ ಇತರೆ ವ್ಯಕ್ತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೊರಬ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಡಿ.ಇ. ದಿನೇಶ್, ಹೊಸನಗರ ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಎಂ.ಬಿ. ನಾಗಭೂಷಣ್, ಸಾಗರ ತಾಲ್ಲೂಕು ಪಂಚಾಯತಿ ತಾಲ್ಲೂಕ್ ಐ.ಇ.ಸಿ ಸಂಯೋಜಕ ಕೆ. ನಿತ್ಯಾನಂದ, ಶಿವಮೊಗ್ಗ ತಾಲ್ಲೂಕು ಮಂಢಘಟ್ಟ ಗ್ರಾಮಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಎಂ., ಶಿಕಾರಿಪುರ ತಾಲ್ಲೂಕಿನ ಅಮಟೇಕೊಪ್ಪ ಗ್ರಾಮಪಂಚಾಯತ್ ಗಣಕಯಂತ್ರ ನಿರ್ವಾಹಕ ಶಿವನಗೌಡ, ಶಿಕಾರಿಪುರ ತಾಲ್ಲೂಕು ಬಿಎಫ್‌ಟಿ ಲೋಹಿತೇಕುಮಾರ್ ಇವರುಗಳು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಏಪ್ರಿಲ್ 9 ರಂದು ಹುಬ್ಬಳ್ಳಿಯಲ್ಲಿ ನಡೆಯುವ ರಾಜ್ಯಮಟ್ಟದ ಜಲಶಕ್ತಿ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನೇಕ ಕೇಂದ್ರ ಮತ್ತು ರಾಜ್ಯ ಸಚಿವರುಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ. ಎಸ್. ಈಶ್ವರಪ್ಪ ಅವರು ಇವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಕಾಧಿಕಾರಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post