ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ತಾವು ಆಯ್ಕೆಯಾಗಿದ್ದು, ಯುವ ಕಾಂಗ್ರೆಸ್ ಸಂಘಟನೆಗೆ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷವನ್ನು ಬಲಪಡಿಸುವೆ ಎಂದು ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹರ್ಷಿತ್ ಗೌಡ ತಿಳಿಸಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನವಾಗಿ ಆಯ್ಕೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸಮ್ಮುಖದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುವ ಕಾಂಗ್ರೆಸ್ ಚುನಾವಣೆಯ ಇತಿಹಾಸದಲ್ಲೇ ಭಾರೀ ಮತಗಳ ಅಂತರದಿಂದ ಕಾರ್ಯಕರ್ತರು ಗೆಲ್ಲಿಸಿದ್ದಾರೆ. ನನಗೆ ಒಟ್ಟು 48, 473 ಮತಗಳು ಬಂದಿದ್ದು, ಇದರಲ್ಲಿ 33, 408 ಮತಗಳ ಅಂತರ ಸಿಕ್ಕಿದೆ. ಇದಕ್ಕೆ ಕಾರಣರಾದ ಯುವ ಕಾಂಗ್ರೆಸ್ ನ ಎಲ್ಲಾ ಸದಸ್ಯರಿಗೆ, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷವು ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯನ್ನು ಪ್ರಜಾ ಪ್ರಭುತ್ವದ ಮಾದರಿಯಲ್ಲೇ ನಡೆಸುತ್ತಾ ಬಂದಿದೆ. ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳು ಮತ್ತು ತಾಲೂಕು ಅಧ್ಯಕ್ಷರ ಆಯ್ಕೆಗಳಿಗೆ ಕಳೆದ ಮೂರು ತಿಂಗಳ ಹಿಂದೆಯೇ ಚುನಾವಣೆ ಪ್ರಕ್ರಿಯೆ ನಡೆದಿತ್ತು, ಅದರ ಫಲಿತಾಂಶ ಈಗ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ನೇತೃತ್ವ ವಹಿಸಲು ನನಗೆ ಸದಾವಕಾಶ ಸಿಕ್ಕಿದೆ ಎಂದರು.ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ, ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವೆ. ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಎನ್ ಎಸ್ ಯು ಐ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಬೇರು ಗಳು. ಅಲ್ಲಿಂದ ಬಂದವರು ಅಧಿಕಾರ ಸಿಗಲಿ, ಬಿಡಲಿ ಎಂದಿಗೂ ಎಲ್ಲಿಗೂ ಹೋಗದೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ನ ನೂತನ ಪದಾಧಿಕಾರಿಗಳು ಪಕ್ಷವನ್ನು ಕಟ್ಟುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಕಡೆ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೇಶ್ ಮಾತನಾಡಿ, ಪಕ್ಷದಲ್ಲಿ ಅಂತರಿಕ ಚುನಾವಣೆಯನ್ನು 2011 ರಲ್ಲಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಪರಿಚಯಿಸಿದ್ದರು. ಇದು ಪಕ್ಷದ ಸಾಮಾನ್ಯ ಕಾರ್ಯಕರ್ತನು ಕೂಡ ಉನ್ನತ ಹುದ್ದೆಗೆ ಬರುವಂತೆ ಮಾಡಿದೆ. ಯಾವುದೇ ರಾಜಕೀಯದ ಹಿನ್ನೆಲೆ ಇಲ್ಲದವರು ಕೂಡ ಉನ್ನತ ಸ್ಥಾನಕ್ಕೆರುವಂತಹ ಅವಕಾಶ ಪಕ್ಷದ ಈ ಆಂತರಿಕ ಚುನಾವಣೆಯ ಮೂಲಕ ಸಿಕ್ಕಿದೆ ಎಂದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ್ ಹುಂಚನದ ಕಟ್ಟೆ ಮಾತನಾಡಿ, ಜಿಲ್ಲಾ ಯುವ ಕಾಂಗ್ರೆಸ್ ನ ಚುನಾವಣಾ ಪ್ರಕ್ರಿಯೆಯು 2024 ರ ಆಗಸ್ಟ್ 20 ರಿಂದ ಸೆಪ್ಟೆಂಬರ್ 22 ರವರೆಗೆ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 1,22,144 ಮತದಾರರು ನೋಂದಣಿಯಾಗಿದ್ದರು. ಇದರಲ್ಲಿ ಸುಮಾರು 58 ಮತದಾರರ ನೋಂದಣಿ ತಿರಸ್ಕøತಗೊಂಡು, 64,081 ಅರ್ಹ ಮತದಾರರು ಉಳಿದಿದ್ದರು. ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹರ್ಷಿತ್ ಗೌಡ ಅವರಿಗೆ 48, 473 ಮತಗಳನ್ನು ಪಡೆದು, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು 15,065 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಜಿಲ್ಲಾ ಯುವ ಕಾಂಗ್ರೆಸ್‍ನ ಚುನಾವಣೆ ಫಲಿತಾಂಶದ ವಿವರ:
ಇತ್ತೀಚೆಗೆ ನಡೆದ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‍ನ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಹರ್ಷಿತ್ ಗೌಡ ಆಯ್ಕೆಯಾಗಿದ್ದಾರೆ. ಹರ್ಷಿತ್ ಗೌಡ ಇವರು ಭರ್ಜರಿ 33,408 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, 48,473 ಪಡೆದಿದ್ದಾರೆ. ಯುವ ಕಾಂಗ್ರೆಸ್‍ನ ಚುನಾವಣೆಯ ಇತಿಹಾಸದಲ್ಲೇ ಇದು ಭಾರೀ ಮತಗಳ ಅಂತರವಾಗಿದೆ. ಹೆಚ್.ಪಿ. ಗಿರೀಶ್ 15065 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವು ಪದಾಧಿಕಾರಿಗಳ ಆಯ್ಕೆಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲೇ ನಡೆಸುತ್ತಾ ಬಂದಿದೆ. ಅದರಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನೂ ಚುನಾವಣೆಯ ಪ್ರಕ್ರಿಯೆಯ ಮೂಲಕವೇ ಆಯ್ಕೆ ಮಾಡುತ್ತಾ ಬಂದಿದೆ.
Also read: ಇನ್ವೆಸ್ಟ್ ಕರ್ನಾಟಕ 2025 | ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿ ಕೇಂದ್ರ | ಸಚಿವ ಎಂ.ಬಿ. ಪಾಟೀಲ
ಉಳಿದಂತೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚರಣ್ ಜೆ. (10,241), ಪ್ರಥಮ ಉಪಾದ್ಯಕ್ಷರಾಗಿ ಲೋಕೇಶ್ ಬಿ. (3266), ದ್ವಿತೀಯ ಉಪಾಧ್ಯಕ್ಷರಾಗಿ ವಿನಯ್ ತಾಂಡ್ಲೆ (824), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಎಸ್. (6,478) ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನಿತಿನ್ ಈ.ಟಿ. (2,365) ಆಯ್ಕೆಯಾಗಿದ್ದಾರೆ.
ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಹಮ್ಮದ್ ಶಫಿ (12,105), ಉಪಾಧ್ಯಕ್ಷರಾಗಿ ಅಲ್ತಾಫ್ ಅಹ್ಮದ್ (2,727), ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಪೂರ್ಣೇಶ್ ಜಿ.ಪಿ. (6,200), ಉಪಾಧ್ಯಕ್ಷರಾಗಿ ಸಂದೀಪ್ ಗೌಡ ಬಿ.ಜಿ. (1,563), ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಹೇಂದ್ರ ಹೆಚ್.ಜಿ. (1,528), ಉಪಾಧ್ಯಕ್ಷರಾಗಿ ಉಮೇಶ ಜಿ. (898), ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಮಂಜುನಾಯ್ಕ (9,196), ಉಪಾಧ್ಯಕ್ಷರಾಗಿ ಸಾಜಿದ್ ಆಲಿ (2,214), ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ (403), ಉಪಾಧ್ಯಕ್ಷರಾಗಿ ಪ್ರದೀಪ್ ಕುಮಾರ್ (205) ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬ್ಲಾಕ್ ಅಧ್ಯಕ್ಷರುಗಳಾಗಿ ಹದಿನಾಲ್ಕು ಜನ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಉತ್ತರ ಬ್ಲಾಕ್ ಅಧ್ಯಕ್ಷರಾಗಿ ಗಿರೀಶ್, ದಕ್ಷಿಣ ಬ್ಲಾಕ್‍ಗೆ ಮಹಮ್ಮದ್ ಗೌಸ್, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಬ್ಲಾಕ್‍ಗೆ ಪ್ರವೀಣ್ ಕುಮಾರ್ ಡಿ.ಟಿ., ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಶಶಿಕುಮಾರ್ ಕೆ., ಭದ್ರಾವತಿ ಕ್ಷೇತ್ರದ ಭದ್ರಾವತಿ ನಗರ ಬ್ಲಾಕ್‍ಗೆ ಅಭಿಷೇಕ್ ಜೆ., ಭದ್ರಾವತಿ ಗ್ರಾಮಾಂತರ ಬ್ಲಾಕ್‍ಗೆ ಮಕ್ಸೂದ್ ಅಹ್ಮದ್, ತೀರ್ಥಹಳ್ಳಿ ಕ್ಷೇತ್ರದ ನಗರ ಬ್ಲಾಕ್‍ಗೆ ಶ್ರೇಯಸ್ ರಾವ್, ಗ್ರಾಮಾಂತರ ಬ್ಲಾಕ್‍ಗೆ ರವಿಕುಮಾರ್ ಹೆಚ್.ಡಿ., ಸಾಗರ ಕ್ಷೇತ್ರದ ಸಾಗರ ಬ್ಲಾಕ್‍ಗೆ ಸದ್ದಾಂ ಹುಸೇನ್, ಹೊಸನಗರ ಬ್ಲಾಕ್‍ಗೆ ವಿಜಯಕುಮಾರ್ ಎಂ.ಎನ್., ಸೊರಬ ಕ್ಷೇತ್ರದ ಸೊರಬ ಬ್ಲಾಕ್‍ಗೆ ಯಶೋಧರ, ಆನವಟ್ಟಿ ಬ್ಲಾಕ್‍ಗೆ ಹರೀಶ್, ಶಿಕಾರಿಪುರ ಕ್ಷೇತ್ರದ ಶಿಕಾರಿಪುರ ಬ್ಲಾಕ್‍ಗೆ ಶಿವು ಹೆಚ್.ಎಂ., ಶಿರಾಳಕೊಪ್ಪ ಬ್ಲಾಕ್‍ಗೆ ಮಹಮ್ಮದ್ ಅತಿಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯುವ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷರ ಚುನಾವಣಾ ಫಲಿತಾಂಶ ಬಾಕಿ ಇದ್ದು, ಚುನಾವಣಾ ಫಲಿತಾಂಶದ ನಂತರ ಜಿಲ್ಲಾ ಯುವ ಕಾಂಗ್ರೆಸ್‍ನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಮ್ಮುಖದಲ್ಲಿ ನಡೆಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಯು.ಶಿವಾನಂದ, ವಿಜಯ್ ಕುಮಾರ್ (ದನಿ), ಮಧುಸೂದನ್, ಚೇತನ್‍ಗೌಡ, ವಿಜಯ್, ರೇಷ್ಮಾ, ಹರ್ಷಿತಾ ರಾಣಿ, ಅಬ್ದುಲ್ ಸತ್ತಾರ್, ಪ್ರವೀಣ್ ಕುಮಾರ್, ಆಕಾಶ್, ಸಾಕ್ಲೀನ್, ಶಿವು, ಮಂಜುನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post