ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಹಾವೇರಿ |
ಲೋಕಸಭಾ ಚುಣಾವಣೆಗೆ ಬಿಜೆಪಿ ತನ್ನ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾವೇರಿ ಕ್ಷೇತ್ರದಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ K E Kantesh ಅವರಿಗೆ ಟಿಕೇಟ್ ಕೈತಪ್ಪಿದೆ.
ಕೇಂದ್ರ ಬಿಜೆಪಿ ಇಂದು ಸಂಜೆ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಾವೇರಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದ ಕಾಂತೇಶ್ ಅವರಿಗೆ ನಿರಾಸೆಯಾಗಿದ್ದು, ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Basavaraja Bommai ಅವರ ಹೆಸರನ್ನು ಘೋಷಣೆ ಮಾಡಿದೆ.
ಹಾವೇರಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದ ಕಾಂತೇಶ್ ಅವರು ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಅತ್ಯಂತ ಸಕ್ರಿಯರಾಗಿ ಸಂಘಟನೆ ಕೈಗೊಂಡಿದ್ದರು. ಕ್ಷೇತ್ರದ ಪ್ರತಿ ನಗರಗಳಿಗೂ ತೆರಳಿ ಜನರೊಂದಿಗೆ ಬೆರೆತು, ನಾಡಿ ಮಿಡಿತ ಅರಿದಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚು ಓಡಾಟ ನಡೆಸಿದ್ದ ಅವರು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಶ್ರಮವಹಿಸಿದ್ದರು.
Also read: ಶಿವಮೊಗ್ಗಕ್ಕೆ ಹೋಗಿ, ಗೀತಾರನ್ನು ಗೆಲ್ಲಿಸಿಕೊಂಡು ಬರೋದು ಅಷ್ಟೇ | ನಟ ಶಿವರಾಜಕುಮಾರ್
ಆದರೆ, ಈಗ ಟಿಕೇಟ್ ಕೈತಪ್ಪಿದ್ದು, ಕ್ಷೇತ್ರದ ಕಾರ್ಯಕರ್ತರು ಹಾಗೂ ಈಶ್ವರಪ್ಪ K S Eshwarappa ಅವರ ಅಭಿಮಾನಿ, ಹಿತೈಷಿಗಳಲ್ಲಿ ಬೇಸರ ಉಂಟು ಮಾಡಿದೆ.
ಇಂದು ಮುಂಜಾನೆಯಷ್ಟೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಈಶ್ವರಪ್ಪ, ಪುತ್ರನಿಗೆ ಟಿಕೇಟ್ ಸಿಗುವ ಭರವಸೆ ಈಗಲೂ ತಮ್ಮಲ್ಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದರು.
ಅಲ್ಲದೇ, ತಾವು ಶಿವಮೊಗ್ಗದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಹಾಗೂ ಹಿತೈಷಿಗಳು ಒತ್ತಡ ಹಾಕುತ್ತಿದ್ದಾರೆ. ಮಾರ್ಚ್ 15ರಂದು ನಡೆಯಲಿರುವ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು.
ಈತ, ಕಾಂತೇಶ್ ಅವರಿಗೂ ಹಾವೇರಿ ಟಿಕೇಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ಮುಂದಿನ ನಡೆಯೇನು ಎಂಬುದು ಕುತೂಹಲ ಮೂಡಿಸಿದೆ.
ಹಿರಿತನಕ್ಕೆ ಮತ್ತೊಂದು ಪರೀಕ್ಷೆ
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರಲ್ಲಿ ಹಿರಿಯರಾದ ಈಶ್ವರಪ್ಪ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯ ಟಿಕೇಟನ್ನು ಪಕ್ಷ ನೀಡಿರಲಿಲ್ಲ. ಚುನಾವಣಾ ರಾಜಕೀಯದಿಂದ ದೂರ ಸರಿಯುವಂತೆ ಪಕ್ಷ ಸೂಚನೆ ನೀಡುವ ಮುನ್ನ ಅವರೇ ಘೋಷಣೆ ಮಾಡಿದ್ದರು.
ಆನಂತರ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರೇ ಸ್ವತಃ ಈಶ್ವರಪ್ಪನವರಿಗೆ ಕರೆ ಮಾಡಿ, ನಿರ್ಧಾರವನ್ನು ಶ್ಲಾಘಿಸಿ, ಪಕ್ಷ ತಮ್ಮೊಂದಿಗೆ ಇರುತ್ತದೆ ಎಂದು ಭರವಸೆ ನೀಡಿದ್ದರು. ಆನಂತರ ಕಾಂತೇಶ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ದೊರೆಯುವ ಭರವಸೆ ಹೆಚ್ಚಾಗಿತ್ತು. ಆದರೆ, ಅದು ಈಗ ಹುಸಿಯಾಗಿದೆ.
ಈಶ್ವರಪ್ಪ ಅವರು ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಮಾದರಿ ಎನ್ನುವಂತೆ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರೋಪದಿಂದ ಮುಕ್ತರಾದ ಹೊರಬಂದ ನಂತರವೂ ಸಹ ಅವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಲಿಲ್ಲ.
ಆನಂತರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ನೀಡದೇ, ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವಂತೆ ವರಿಷ್ಠರು ಸೂಚಿಸಿದ್ದರು. ಆಗಲೂ ಸಹ ಈಶ್ವರಪ್ಪ ಅವರು ಮುತ್ಸದ್ಧಿತನ ಮೆರೆದು ಪಕ್ಷ ತಮ್ಮ ತಾಯಿಯಿದ್ದಂತೆ ಎಂದು ಬಿಜೆಪಿಗಾಗಿ ಸೇವೆ ಸಲ್ಲಿಸುತ್ತಲೇ ಇದ್ದಾರೆ.
ಆದರೆ, ಈಗ ಅವರ ಪುತ್ರನಿಗೂ ಸಹ ಟಿಕೇಟ್ ನೀಡದೇ ಇರುವುದು ಅವರ ಕುಟುಂಬಕ್ಕಾದ ಅನ್ಯಾಯ ಎಂದು ಅವರ ಹಿತೈಷಿ ಹಾಗೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post