ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಂದು ವಿಷಯದಲ್ಲಿ ಪರಿಣತಿ ಹೊಂದಿದ್ದ ಸರ್.ಎಂ. ವಿಶ್ವೇಶ್ವರಯ್ಯನವರನ್ನು ಪಡೆದಿದ್ದು ಭಾರತ ದೇಶದ ಸೌಭಾಗ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಡಿ.ಎಸ್. ದಿನಕರ್ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ಎಂಜಿನಿಯರ್ಸ್ ಡೇ ಮತ್ತು ಇಂಪ್ಲ್ಯಾಂಟ್ ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯನವರ ಚಿಂತನೆ ಆಗಾದವಾದದ್ದು. ಅವರ ಅದ್ಭುತ ಆಲೋಚನೆಯಲ್ಲಿ ರೂಪಗೊಂಡ ಭದ್ರಾವತಿಯ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಬಹುದೊಡ್ಡ ಕೊಡುಗೆ. ಒಂದು ಕಾಲದಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಕಟ್ಟಡಗಳ ನಿರ್ಮಾಣ ಕಾರ್ಯ ನಡೆದರು ಅಲ್ಲಿ ಭದ್ರಾವತಿಯ ಕಬ್ಬಿಣ ಪ್ರಮುಖ ಬೇಡಿಕೆಯಾಗಿತ್ತು. ಇಂತಹ ನೂರಾರು ಆವಿಷ್ಕಾರಿ ಯೋಜನೆಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗವಕಾಶ ನೀಡಿದ ಪುಣ್ಯಾತ್ಮ. ಇಂತಹ ಚೇತನದ ಕುರಿತು ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕಿದೆ. ಅವರ ಅಗಾದವಾದ ಚಿಂತನೆಗಳು ವಿದ್ಯಾರ್ಥಿಗಳ ಬದುಕಿನ ಮಾರ್ಗದರ್ಶಕವಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲ ಎಂದರು.
ವಿಶ್ವದ ನೀಲನಕ್ಷೆಯಲ್ಲಿ ಇಂದು ಶಿವಮೊಗ್ಗ ಪ್ರಜ್ವಲಿಸುತ್ತಿದೆ. ನೂರಾರು ಕೋಟಿ ರೂಪಾಯಿ ವಸ್ತುಗಳು ಜಿಲ್ಲೆಯ ವಿವಿಧ ಕಾರ್ಖಾನೆಗಳಲ್ಲಿ ಉತ್ಪಾದನೆಗೊಂಡು ಪ್ರಪಂಚದಾದ್ಯಂತ ರಫ್ತುಗೊಳ್ಳುತ್ತಿರುವುದು ನಾವು ನೀವೆಲ್ಲ ಹೆಮ್ಮೆ ಪಡುವ ವಿಚಾರವಾಗಿದೆ. ಅಂತಹ ಅದ್ಭುತ ಉದ್ಯಮಿಗಳು, ಕ್ರಿಯಾಶೀಲ ಚಿಂತಕರು ನಮ್ಮೊಂದಿಗಿರುವುದು ಜಿಲ್ಲೆಯ ಅಭಿವೃದ್ದಿಗೆ ಶಕ್ತಿಯಾಗಿದೆ ಎಂದು ಹೇಳಿದರು.
ಶಿವಮೊಗ್ಗ ರೋಟರಿ ಅಧ್ಯಕ್ಷರಾದ ಕಿಶೋರ ಶಿರನಾಳಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಶಿವಮೊಗ್ಗ ಎಸ್.ಜಿ.ಆರ್ ಟ್ರಾನ್ಸ್‌ಫಾರ್ಮರ್ಸ್ ಪ್ರೊಪ್ರೈಟರ್ ಎಸ್.ಎಂ.ಮಂಜುನಾಥ, ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದ ಫೋರ್ಮೆನ್ ಎಸ್.ಚಂದ್ರಶೇಖರ್, ಇನ್ನೊವೆಂಟ್ ಐ.ಟಿ ಸೊಲ್ಯೂಷನ್ ಸಿಇಓ ಅಲೋಕ್ ಅವರನ್ನು ಸನ್ಮಾನಿಸಲಾಯಿತು.
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಕೆ.ಎಸ್. ಅಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post